249 ಬೋಧಕರ ಪಿಎಚ್.ಡಿ ನಕಲಿ: ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಕಳ್ಳಾಟ ಬಟಾಬಯಲು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • 249 ಅತಿಥಿ ಉಪನ್ಯಾಸಕರು ನಕಲಿ ಪಿಎಚ್.ಡಿ ಪ್ರಮಾಣಪತ್ರ ಕೊಟ್ಟ ಆಘಾತಕಾರಿ ಸಂಗತಿ
  • ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜತೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಹೊರಗೆ

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಉಳಿಸಿಕೊಳ್ಳುವ ದುರುದ್ದೇಶದಿಂದ ಬರೋಬ್ಬರಿ 249 ಅತಿಥಿ ಉಪನ್ಯಾಸಕರು ನಕಲಿ ಪಿಎಚ್.ಡಿ ಪ್ರಮಾಣಪತ್ರ ನೀಡಿರುವ ಆಘಾತಕಾರಿ ಸಂಗತಿ ಕಾಲೇಜು ಮಟ್ಟದ ಸಮಿತಿ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕಾಲೇಜು ಶಿಕ್ಷಣ ಇಲಾಖೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜತೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲರನ್ನೂ ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡುವುದಾಗಿ ಆದೇಶ ಹೊರಡಿಸಿದೆ.

ರಾಜ್ಯದ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಲು ಸಂಬಂಧಪಟ್ಟ ವಿಷಯದಲ್ಲಿ ನೆಟ್, ಕೆ-ಸೆಟ್ ಅಥವಾ ಪಿಎಚ್.ಡಿ ಪದವೀಧರರಾಗಿರಬೇಕೆಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗದ (ಯುಜಿಸಿ) ನಿಯಮವಿದೆ. ರಾಜ್ಯಾದ್ಯಂತ ಒಟ್ಟು 10,335 ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ನೀಡಿದ್ದ ಸೂಚನೆಯಂತೆ, 2025-26ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿರುವ ಅತಿಥಿ ಉಪನ್ಯಾಸಕರ ಪಿಎಚ್.ಡಿ ಪ್ರಮಾಣಪತ್ರಗಳ ನೈಜತೆ ಪರಿಶೀಲಿಸಿದಾಗ, ನಕಲಿ/ಅಮಾನ್ಯ ಪಿಎಚ್.ಡಿ ಪ್ರಮಾಣ ಪತ್ರ ಸಲ್ಲಿಸಿರುವುದು ಬಹಿರಂಗಗೊಂಡಿದೆ.

ಕ್ರಮಕ್ಕೆ ಕಟ್ಟುನಿಟ್ಟಿನ ಸೂಚನೆ

ಸರ್ಕಾರಕ್ಕೆ ಸುಳ್ಳು ಮಾಹಿತಿ/ದಾಖಲೆ ನೀಡಿ ವಂಚನೆ ಎಸಗಲು ಪ್ರಯತ್ನಿಸಿರುವ ಅತಿಥಿ ಉಪನ್ಯಾಸಕರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಒಂದು ವಾರದೊಳಗೆ ವರದಿಯನ್ನು ಇಲಾಖೆ ಆಯುಕ್ತರ ಕಚೇರಿಗೆ ಸಲ್ಲಿಸಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಎಲ್ಲರನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡಬೇಕು ಎಂದು ಕಾಲೇಜು ಪ್ರಾಂಶುಪಾಲರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ತಪ್ಪಿಸಿಕೊಳ್ಳಲು ತಂತ್ರ

ಪಟ್ಟಿಯಲ್ಲಿರುವ 249 ಮಂದಿ ಜತೆಗೆ ಮತ್ತಷ್ಟು ನಕಲಿ ಪಿಎಚ್.ಡಿ ಪ್ರಮಾಣಪತ್ರ ಹೊಂದಿರುವ ಅತಿಥಿ ಉಪನ್ಯಾಸಕರಿದ್ದಾರೆಂದು ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ. ಪ್ರಮಾಣಪತ್ರ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಹಲವರು ಅನಾರೋಗ್ಯದ ನೆಪ ನೀಡಿ ರಜೆಯ ಮೇಲೆ ತೆರಳಿದ್ದಾರೆ ಅಥವಾ ಈ ವರ್ಷದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ರಜೆಯ ಮೇಲಿರುವ ಅತಿಥಿ ಉಪನ್ಯಾಸಕರ ಪಟ್ಟಿಗಳನ್ನು ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತಿಳಿದು ಬಂದಿದೆ.

ಪತ್ತೆಯಾಗಿದ್ದು ಹೇಗೆ?

ಹಿಂದಿನ ವರ್ಷದ ಆಯ್ಕೆ ಪ್ರಕ್ರಿಯೆ ವೇಳೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯವಿರುವ ಕಾರ್ಯಭಾರಕ್ಕೆ ಅನುಗುಣವಾಗಿ ಆನ್​ಲೈನ್ ಕೌನ್ಸೆಲಿಂಗ್ ನಡೆಸಿ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅಭ್ಯರ್ಥಿಗಳು ಆನ್​ಲೈನ್ ಅರ್ಜಿಯಲ್ಲಿ ನೀಡಿದ್ದ ಪ್ರಮಾಣಪತ್ರಗಳ ನೈಜತೆ ವರದಿಯನ್ನು ಕಡ್ಡಾಯವಾಗಿ ಸಂಬಂಧಪಟ್ಟ ವಿಶ್ವವಿದ್ಯಾಲಯ/ಸಂಸ್ಥೆಗಳಿಂದ ಒಂದು ಬಾರಿ ಪರಿಶೀಲಿಸಿಕೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚಿಸಲಾಗಿತ್ತು. ಅದರನ್ವಯ ಪರಿಶೀಲಿಸಿದಾಗ ಅಸಲಿಯತ್ತು ಬಹಿರಂಗವಾಗಿದೆ.

ಕಲಬುರಗಿ ಟಾಪ್

ಇಲಾಖೆ ಪ್ರದೇಶವಾರು ನಕಲಿಗಳನ್ನೂ ಪತ್ತೆ ಮಾಡಿದೆ. 249 ನಕಲಿ ಪಿಎಚ್.ಡಿ ಪೈಕಿ 153 ಮಂದಿ ಕಲಬುರಗಿ ಪ್ರಾದೇಶಿಕ ವಿಭಾಗದವರು. ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ 24, ಮೈಸೂರು- 22, ಶಿವಮೊಗ್ಗ-17, ಮಂಗಳೂರು-2, ಧಾರವಾಡ-31 ಇದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ಸರ್ಕಾರಿ ಪದವಿ ಕಾಲೇಜೊಂದರಲ್ಲೇ 20 ಮಂದಿ ನಕಲಿ ಪಿಎಚ್.ಡಿ ಪದವೀಧರರಿದ್ದರೆ, ಬೀದರ್ ಪ್ರಥಮ ದರ್ಜೆ ಕಾಲೇಜಿನಲ್ಲಿ 19, ಗುಲ್ಬರ್ಗ ಮಹಿಳಾ ಕಾಲೇಜಿನಲ್ಲಿ 13 ಮತ್ತು ಕೊಪ್ಪಳ ಮಹಿಳಾ ಕಾಲೇಜಿನಲ್ಲಿ 7 ಮಂದಿ ಪತ್ತೆಯಾಗಿದ್ದಾರೆ.

ಡಿಪ್ಲೊಮಾ ಸುಳ್ಳಾಟ!

ಕೋಲಾರ ವೃತ್ತದ ಚಿಕ್ಕಬಳ್ಳಾಪುರ, ಚಿಂತಾಮಣಿ ವಿಭಾಗದ ಕೆಪಿಟಿಸಿಎಲ್ ಹಾಗೂ ಬೆಸ್ಕಾಂನ 40ಕ್ಕೂ ಅಧಿಕ ನೌಕರರು ಜೂನಿಯರ್ ಇಂಜಿನಿಯರ್ (ಜೆಇ) ಹುದ್ದೆ ಬಡ್ತಿಗಾಗಿ ಕಾಲೇಜಿಗೆ ಹೋಗದೆಯೇ ಸಂಜೆ ಪಾಲಿಟೆಕ್ನಿಕ್ ಕಾಲೇಜಿನಿಂದ ಅಕ್ರಮವಾಗಿ ಡಿಪ್ಲೊಮಾ ಪಡೆದಿರುವ ವಿಚಾರ ಬಯಲಾಗಿದೆ. ಅಕ್ರಮ ಎಸಗಿರುವವರ ಡಿಪ್ಲೊಮಾ ರದ್ದುಪಡಿಸುವ ಜತೆಗೆ ತನಿಖೆಗೆ ಆದೇಶಿಸುವಂತೆ ಕೋರಿ ಅರ್ಹ ಅಭ್ಯರ್ಥಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಗುರುವಾರ ಈ ಅರ್ಜಿ ವಿಚಾರಣೆಗೆ ಬರಲಿದೆ. ಪರೀಕ್ಷೆಯಲ್ಲಿ ಕಾಪಿ ಮಾಡಲು 40 ನೌಕರರಿಂದ ತಲಾ 500 ರೂ.ನಂತೆ ಉಪನ್ಯಾಸಕರು ಹಣ ಪಡೆದಿದ್ದಾರೆಂಬ ಆರೋಪ ಕೇಳಿಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net