ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ ೧.೮೯ ಲಕ್ಷಕ್ಕೂ ಅಽಕ ಮತದಾರರ ಹೆಸರು ಕೈಬಿಡಲಾಗಿದೆ ಎಂದು ಜಿಲ್ಕಾಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಽಕಾರಿ ರಾಹುಲ್ ಪಾಂಡ್ವೆ ತಿಳಿಸಿದ್ದಾರೆ.
ಸೋಮವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು ೧೦,೫೩,೨೩೬ ಮತದಾರರಿದ್ದು, ಈ ಪೈಕಿ ೮,೬೪,೦೦೩ ಮತದಾರರ ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಉಳಿದ ೧,೮೯,೨೩೩ ಮತದಾರರ ನಮೂನೆಗಳು ಸಂಗ್ರಹವಾಗದ ಹಿನ್ನೆಲೆಯಲ್ಲಿ ಅವರನ್ನು ಗೈರು, ಸ್ಥಳಾಂತರಗೊಂಡವರು, ಮೃತರು, ದ್ವಂದ್ವ ನೋಂದಣಿ ಹಾಗೂ ಇತರೆ (ಎಎಸ್ ಡಿಡಿಒ) ವಿಭಾಗಗಳಲ್ಲಿ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮತದಾರರು ಸ್ಥಳಾಂತರಗೊAಡಿರುವುದು ಪತ್ತೆಯಾಗಿದ್ದು, ೧,೧೬,೯೩೭ ಜನರು ಸ್ಥಳಾಂತರಗೊಂಡಿದ್ದಾರೆ. ೨೯,೦೨೬ ಜನರು ಮೃತ ಪಟ್ಟಿದ್ದಾರೆ. ೨೨,೫೦೭ ದ್ವಂದ್ವ ನೊಂದಣಿಯಾಗಿವೆ. ೧೭,೩೦೬ ಜನರು ಗೈರಾಗಿದ್ದಾರೆ ಎಂದರು.
ತಾಲೂಕುವಾರು ಪರಿಶೀಲಿಸಿದಾಗ ಗುರುಮಠಕಲ್‌ನಲ್ಲಿ ನಮೂನೆಗಳು ಸಂಗ್ರಹವಾಗದ ಪ್ರಮಾಣ ಹೆಚ್ಚಿದೆ. ಗುರುಮಠಕಲ್‌ನಲ್ಲಿ ೧,೩೪,೬೯೪ ಮತದಾರರ ಪೈಕಿ ೩೦,೩೩೮ ಮತದಾರರ ನಮೂನೆ ಬಾಕಿ ಉಳಿದಿದ್ದು, ಶೇ.೨೨.೫೨ ಇದೆ. ಯಾದಗಿರಿ ತಾಲೂಕಿನಲ್ಲಿ ೪೬,೭೩೪ (ಶೇ.೧೯.೯೬), ಶಹಾಪುರದಲ್ಲಿ ೪೨,೭೮೨ (ಶೇ.೧೮.೪೯), ಸುರಪುರದಲ್ಲಿ ೩೪,೦೮೬ (ಶೇ.೧೬.೨೭), ವಡಗೇರಾದಲ್ಲಿ ೧೫,೪೧೪ (ಶೇ.೧೫.೩೪) ಹಾಗೂ ಹುಣಸಗಿಯಲ್ಲಿ ೧೯,೮೭೫ (ಶೇ.೧೩.೯೦) ನಮೂನೆಗಳು ಸಂಗ್ರಹವಾಗಿಲ್ಲ ಎಂದು ಅವರು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕೋಲಾರ್, ಸಹಾಯಕ ಆಯುಕ್ತ ಶ್ರೀಧರ್ ಗೊಟೂರೆ ಇತರರಿದ್ದರು.
೫೫ ಸಾವಿರ ಮತದಾರರ ಪರಿಶೀಲನೆ
ಎಸ್‌ಐಆರ್‌ನಲ್ಲಿ ೧೨,೨೬೪ ಮತದಾರರನ್ನು ನೋ ಮ್ಯಾಪಿಂಗ್ ಹಾಗೂ ೪೨,೭೯೮ ಮತದಾರರ ವಿವರಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಒಟ್ಟು ೫೫,೦೬೨ ಮತದಾರರ ದಾಖಲೆಗಳ ಪರಿಶೀಲನೆ ನಡೆಯಲಿದೆ ಎಂದರು. ಈ ಮತದಾರರಿಗೆ ನೋಟಿಸ್ ಜಾರಿ ಮಾಡಿ, ಸಹಾಯಕ ಮತದಾರರ ನೋಂದಣಿ ಅಽಕಾರಿಗಳ (ಎಇಆರ್‌ಒ) ಮುಂದೆ ಪೌರತ್ವ ಮತ್ತು ಗುರುತಿನ ದಾಖಲೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು. ದಾಖಲೆ ಪರಿಶೀಲನೆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
೬೭ ಎಇಆರ್‌ಒಗಳ ನಿಯೋಜನೆ
ಹಕ್ಕು ಮತ್ತು ಆಕ್ಷೇಪಣೆಗಳ ಸ್ವೀಕಾರಕ್ಕಾಗಿ ಜಿಲ್ಲೆಯಲ್ಲಿ ೬೭ ಎಇಆರ್‌ಒ ಹಾಗೂ ೬ ಡೇಟಾ ಎಂಟ್ರಿ ಆಪರೇಟರ್‌ಗಳನ್ನು ನಿಯೋಜಿಸಲಾಗಿದೆ. ಸುರಪುರದಲ್ಲಿ ೨೧, ಯಾದಗಿರಿಯಲ್ಲಿ ೧೭, ಗುರುಮಠಕಲ್‌ನಲ್ಲಿ ೧೫ ಹಾಗೂ ಶಹಾಪುರದಲ್ಲಿ ೧೪ ಎಇಆರ್‌ಒಗಳು ಕಾರ್ಯನಿರ್ವಹಿಸಲಿದ್ದಾರೆ. ಎಇಆರ್‌ಒಗಳ ತೀರ್ಮಾನದ ವಿರುದ್ಧ ಜಿಲ್ಲಾಧಿಕಾರಿಗಳ ಬಳಿ ಮೊದಲ ಮೇಲ್ಮನವಿ ಹಾಗೂ ಮುಖ್ಯ ಚುನಾವಣಾಽಕಾರಿ (ಸಿಇಒ) ಅವರ ಬಳಿ ಎರಡನೇ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಽಕಾರಿ ಪಾಂಡ್ವೆ ತಿಳಿಸಿದರು. ಎಸ್‌ಐಆರ್ ಬಳಿಕ ಜಿಲ್ಲೆಯಲ್ಲಿ ೨೮ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ ೧,೧೩೪ರಿಂದ ೧,೧೬೨ಕ್ಕೆ ಏರಿಕೆಯಾಗಿದೆ.