_1774893466543.webp?w=480&auto=format%2Ccompress&fit=max)
_1774893466543.webp?w=480&auto=format%2Ccompress&fit=max)
ಬೆಂಗಳೂರು: ರಾಜ್ಯದ ಹೋಟೆಲ್ಗಳಲ್ಲಿ ಉಂಟಾಗಿರುವ ವಾಣಿಜ್ಯ ಸಿಲಿಂಡರ್ ಅಭಾವಕ್ಕೆ ಶೀಘ್ರವೇ ಪರಿಹಾರ ಸಿಗಲಿದ್ದು, ಹೋಟೆಲ್ ಮಾಲೀಕರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅಭಯ ನೀಡಿದ್ದಾರೆ.
ಭಾನುವಾರ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಸಿಲಿಂಡರ್ ಪೂರೈಕೆಗೆ ಆದೇಶ ಹೊರಬಿದ್ದಿದ್ದು, ನಾವು ಭರವಸೆ ನೀಡಿದಂತೆಯೇ ಮಂಗಳವಾರ ಹೋಟೆಲ್ಗಳಿಗೆ 17,500 ಸಿಲಿಂಡರ್ಗಳು ವಿತರಣೆಯಾಗಲಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಸಿಲಿಂಡರ್ ಹಾಹಾಕಾರದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಈ ಸಮಸ್ಯೆಗೆ ಕೇಂದ್ರವೇ ನೇರ ಹೊಣೆ ಎಂದರು.
ಈ ಹಿಂದೆ ಒತ್ತಾಯ ಮಾಡಿ ಗ್ಯಾಸ್ ಸಂಪರ್ಕ ನೀಡುತ್ತೇವೆ ಎಂದು ಹೇಳಿದ್ದ ಕೇಂದ್ರ ಸರ್ಕಾರ, ಈಗ ಉಂಟಾಗಿರುವ ಈ ತೀವ್ರ ಅಭಾವದ ಬಗ್ಗೆ ಮೌನ ಮುರಿಯಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಪೆಟ್ರೋಲಿಯಂ ಸಚಿವರು ಈ ಬಗ್ಗೆ ಮಾತನಾಡಲಿ. ರಾಜ್ಯದ ಜನತೆಗೆ ಹಾಗೂ ಹೋಟೆಲ್ ಉದ್ಯಮಕ್ಕೆ ಸೂಕ್ತ ಪರಿಹಾರ ಒದಗಿಸಲಿ ಎಂದು ಆಗ್ರಹಿಸಿದರು. ಗ್ಯಾಸ್ ಸಿಲಿಂಡರ್ ಬುಕಿಂಗ್ಗೆ ಕಟ್ಟುನಿಟ್ಟಿನ ನಿಯಮ ವಿವರಿಸಿದ ಅವರು, ನಗರ ಪ್ರದೇಶದ ಗ್ರಾಹಕರು 25 ದಿನಗಳ ನಂತರ, ಗ್ರಾಮೀಣ ಭಾಗದಲ್ಲಿ 45 ದಿನಗಳಿಗೊಮ್ಮೆ ಸಿಲಿಂಡರ್ ನೀಡಬೇಕು ಎಂದು ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ.
ಎಲ್ಲ ಗ್ಯಾಸ್ ಏಜೆನ್ಸಿಗಳು ಈ ನಿಯಮಗಳಿಗೆ ಅನುಗುಣವಾಗಿಯೇ ನಡೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ನಿಗದಿತ ದಿನಗಳ ನಂತರವೂ ಸಿಲಿಂಡರ್ ಬುಕ್ ಮಾಡಿಕೊಳ್ಳಲು ನಿರಾಕರಿಸಿದರೆ ಅಥವಾ ಸತಾಯಿಸಿದರೆ, ನೇರವಾಗಿ ಆಯಾ ಗ್ಯಾಸ್ ಪೂರೈಕೆ ಕಂಪನಿಗಳಿಗೆ ದೂರು ನೀಡಬಹುದು ಎಂದು ಸಲಹೆ ನೀಡಿದರು.
ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳಿಗೆ ತಕ್ಷಣಕ್ಕೆ ಡೀಸೆಲ್ ಸಮಸ್ಯೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಕೆಎಸ್ಆರ್ಟಿಸಿ ನಾಲ್ಕು ನಿಗಮಕ್ಕೂ ಏನೂ ತೊಂದರೆ ಆಗಿಲ್ಲ. ಯುದ್ಧ ಹೀಗೆ ಮುಂದುವರಿದರೆ ಏನಾದರೂ ಸಮಸ್ಯೆ ಆಗಬಹುದು. ತಕ್ಷಣಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.