

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ನೇಮಕಾತಿ ನಿಯಮದಲ್ಲಿ ಎರಡು ಪ್ರಮುಖವಾಗಿ ಬದಲಾವಣೆ ಮಾಡಲಾಗಿದ್ದು, ವಿವಾಹಿತೆಯರು ತಂದೆ ಅಥವಾ ಪತಿಯ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಬಹುದಾಗಿದೆ. ಅಲ್ಲದೆ ಒಬ್ಬ ಅಭ್ಯರ್ಥಿಯು ಒಂದು ವೃಂದದಲ್ಲಿ ಒಂದೇ ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
2022ರ ನೇಮಕಾತಿ ಅಧಿಸೂಚನೆಯಲ್ಲಿ ಆದಾಯ ಪ್ರಮಾಣಪತ್ರದ ಸ್ಪಷ್ಟತೆ ಇಲ್ಲವಾದ್ದರಿಂದ ಸುಪ್ರೀಂಕೋರ್ಟ್ವರೆಗೂ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಈ ಬಾರಿ ಆದಾಯ ಪ್ರಮಾಣಪತ್ರದಲ್ಲಿ ಮಿತಿ ಹೇರಿಲ್ಲ. ಕರ್ನಾಟಕ ನಾಗರಿಕ ಸೇವೆ- 1977 (ಸಾಮಾನ್ಯ ನೇಮಕಾತಿ) ನಿಯಮ 9ರ ಉಪನಿಯಮ (1ಬಿ) ಅನ್ವಯ ಪಾಲನೆ ಮಾಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯ ವರ್ಗದವರಿಗೆ 40 ವರ್ಷ, ಒಬಿಸಿ 43 ಹಾಗೂ ಪರಿಶಿಷ್ಟರು ಮತ್ತು ಪ್ರವರ್ಗ-1, ಅಂಗವಿಕಲರಿಗೆ 45 ವರ್ಷ ನಿಗದಿ ಮಾಡಲಾಗಿದೆ.
ಒಂದು ವೃಂದದಲ್ಲಿ ಒಂದೇ ಅರ್ಜಿ: ಆನ್ಲೈನ್ನಲ್ಲಿ ಒಂದೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಒಂದು ವೃಂದದ ಒಂದು ಹುದ್ದೆಗೆ ಒಂದು ಜಿಲ್ಲೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಆದರೆ, ಒಂದೇ ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚು ವೃಂದದ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದು. ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ವೃಂದಕ್ಕೂ ಅರ್ಜಿ ನೀಡಬಹುದು. ಪ್ರತಿ ವೃಂದಕ್ಕೂ ಪ್ರತ್ಯೇಕ ಶುಲ್ಕ ನಿಗದಿ ಮಾಡಲಾಗಿದೆ. ಉದಾ: ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ ಒಂದು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದರೆ, ಮತ್ತೊಂದು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸುವ ಹಾಗಿಲ್ಲ. ಆದರೆ, ಪ್ರೌಢ ಶಾಲಾ ಶಿಕ್ಷಕ ಹುದ್ದೆಗೆ ಮತ್ತೊಂದು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬಹುದು.
ಜಿಲ್ಲಾ ಹಂತದಲ್ಲಿ ನೇಮಕಾತಿ: ಒಟ್ಟಾರೆ 15 ಸಾವಿರ ಹುದ್ದೆಗಳನ್ನು ಜಿಲ್ಲಾ ಹಂತದಲ್ಲಿ ಹಂಚಿಕೆ ಮಾಡಲಾಗಿದೆ. ಪ್ರಾಥಮಿಕ ಶಾಲೆಗಳಿಗೆ ಆಯಾ ಶೈಕ್ಷಣಿಕ ಜಿಲ್ಲಾವಾರು ಹಾಗೂ ಪ್ರೌಢ ಶಾಲೆಗಳಿಗೆ ವಿಭಾಗಾವಾರು ಅಧಿಸೂಚನೆ ಹೊರಡಿಸಲಾಗಿದೆ.
ಯಾವ ವಿಷಯಗಳು?: ಕನ್ನಡ, ಆಂಗ್ಲ ಭಾಷೆ, ಕಲಾ ಶಿಕ್ಷಣ (ಕನ್ನಡ/ಇಂಗ್ಲಿಷ್ ಮಾಧ್ಯಮ), ಜೀವ ವಿಜ್ಞಾನ (ಕನ್ನಡ/ ಇಂಗ್ಲಿಷ್ ಮಾಧ್ಯಮ), ಗಣಕ ವಿಜ್ಞಾನ, ದೈಹಿಕ ಶಿಕ್ಷಣ (ಗ್ರೇಡ್-1,2).
ಸಾಮಾನ್ಯ, ಹಿಂದುಳಿದ ವರ್ಗದ ಅಭ್ಯರ್ಥಿಗಳು ಒಂದು ವೃಂದದ ಹುದ್ದೆಗೆ 750 ರೂ. ಒಂದೇ ವೃಂದದ ಎರಡು ಹುದ್ದೆಗೆ ಅರ್ಜಿ ಸಲ್ಲಿಸಿದಲ್ಲಿ 1,125 ರೂ. ಪಾವತಿಸಬೇಕು. ಪರಿಶಿಷ್ಟ, ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳಿಗೆ ಕ್ರಮವಾಗಿ 500 ಹಾಗೂ 750 ರೂ. ನಿಗದಿ ಮಾಡಲಾಗಿದೆ. ಎರಡಕ್ಕಿಂತ ಹೆಚ್ಚು ಹುದ್ದೆಗಳಿಗೆ ಹೆಚ್ಚುವರಿಯಾಗಿ ಪ್ರತಿ ವಿಷಯಕ್ಕೆ 375 ಹಾಗೂ 250 ರೂ. ಪಾವತಿಸಬೇಕಾಗುತ್ತದೆ.
ಎಲ್ಲ ಹುದ್ದೆಗಳಿಗೆ ಆ.18ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಸೆ.7 ಕೊನೆಯ ದಿನವಾಗಿದೆ. ಅ.5, 6, 12, 13, 21 ಹಾಗೂ 22ರಂದು ಸ್ಪರ್ಧಾತ್ಮಕ ಪರೀಕ್ಷೆ ನಿಗದಿಯಾಗಿದೆ. ಪದವಿ, ಬಿ.ಇಡಿ ಹಾಗೂ ಟಿಇಟಿಗಳಲ್ಲಿ ಅರ್ಹತೆ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.