ರಾಜ್ಯಕ್ಕೆ 1,300 ವೈದ್ಯಕೀಯ ಸೀಟು ಹೆಚ್ಚಳ, 2 ಹೊಸ ಮೆಡಿಕಲ್ ಕಾಲೇಜು

ಎಂಬಿಬಿಎಸ್ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ
ಎಂಬಿಬಿಎಸ್ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ
Published on

ಪ್ರಮುಖ ಮುಖ್ಯಾಂಶಗಳು

  • ದೇಶದಲ್ಲಿಯೇ ಅತಿ ಹೆಚ್ಚು ವೈದ್ಯಕೀಯ ಸೀಟು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಲ್ಲಿ ಒಟ್ಟು 15,395 ವೈದ್ಯಕೀಯ ಸೀಟುಗಳು ಲಭ್ಯ
  • ಕೋಲಾರ ಜಿಲ್ಲೆ ಕೆಜಿಎ್ನಲ್ಲಿರುವ ಚೆಟ್ಟಿನಾಡು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಆಳ್ವಾಸ್ ವೈದ್ಯಕೀಯ ವಿಜ್ಞಾನ ಸಂಸ್ಥೆ ರಾಜ್ಯಕ್ಕೆ ದೊರೆತಿರುವ ಹೊಸ ಕಾಲೇಜುಗಳಾಗಿವೆ.
  • ಇನ್ನು ಹೆಚ್ಚುವರಿ ಸೀಟುಗಳಲ್ಲಿ 1,150 ಸೀಟುಗಳು ಖಾಸಗಿ ಕಾಲೇಜುಗಳಲ್ಲಿ ಮತ್ತು 150 ಸೀಟುಗಳು ಸರ್ಕಾರಿ ಕಾಲೇಜುಗಳಲ್ಲಿ ಹೆಚ್ಚಳ
ಬೆಂಗಳೂರು: ರಾಜ್ಯದ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೆ ಖುಷಿಯ ವಿಚಾರವಾಗಿದೆ. ಕಳೆದ ವರ್ಷಕ್ಕಿಂತ ಎರಡು ಹೊಸ ವೈದ್ಯಕೀಯ ಕಾಲೇಜುಗಳು ಹಾಗೂ ಹಿಂದಿನ ವರ್ಷಕ್ಕಿಂತ 1,300 ಸೀಟು ಹೆಚ್ಚಳವಾಗಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) 2026-27ನೇ ಸಾಲಿನ ಎಂಬಿಬಿಎಸ್ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಿದೆ. ಇದು ದೇಶಾದ್ಯಂತ ವೈದ್ಯಕೀಯ ಪದವಿ ಕೋರ್ಸ್ ಆಕಾಂಕ್ಷಿಗಳಲ್ಲಿ ಭಾರಿ ಸಂತಸಕ್ಕೂ ಕಾರಣವಾಗಿದೆ.
ಎನ್‌ಎಂಸಿ ಪ್ರಕಾರ ಈ ವರ್ಷ ಬರೋಬ್ಬರಿ 9,911 ಸೀಟುಗಳ ಹೆಚ್ಚಳವಾಗಿದ್ದು, ಇದರೊಂದಿಗೆ ದೇಶದ ಒಟ್ಟು ಎಂಬಿಬಿಎಸ್ ಸೀಟುಗಳ ಸಂಖ್ಯೆ 1,36,939ಕ್ಕೆ ಏರಿಕೆಯಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ವೈದ್ಯಕೀಯ ಸೀಟು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಲ್ಲಿ ಒಟ್ಟು 15,395 ವೈದ್ಯಕೀಯ ಸೀಟುಗಳು ಲಭ್ಯವಾಗಲಿವೆ.

ಎರಡು ಹೊಸ ಕಾಲೇಜುಗಳು:

ಕೋಲಾರ ಜಿಲ್ಲೆ ಕೆಜಿಎ್ನಲ್ಲಿರುವ ಚೆಟ್ಟಿನಾಡು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಆಳ್ವಾಸ್ ವೈದ್ಯಕೀಯ ವಿಜ್ಞಾನ ಸಂಸ್ಥೆ ರಾಜ್ಯಕ್ಕೆ ದೊರೆತಿರುವ ಹೊಸ ಕಾಲೇಜುಗಳಾಗಿವೆ. ಎರಡೂ ಕಾಲೇಜುಗಳಿಗೆ ಕ್ರಮವಾಗಿ 100 ಮತ್ತು 150 ಸೀಟುಗಳ ಹೆಚ್ಚಳ ಮಾಡಲಾಗಿದೆ.
ಇನ್ನು ಹೆಚ್ಚುವರಿ ಸೀಟುಗಳಲ್ಲಿ 1,150 ಸೀಟುಗಳು ಖಾಸಗಿ ಕಾಲೇಜುಗಳಲ್ಲಿ ಮತ್ತು 150 ಸೀಟುಗಳು ಸರ್ಕಾರಿ ಕಾಲೇಜುಗಳಲ್ಲಿ ಹೆಚ್ಚಳವಾಗಿವೆ. ಮಂಡ್ಯ ವೈದ್ಯಕೀಯ ಕಾಲೇಜು, ಹುಬ್ಬಳ್ಳಿಯ ಕಿಮ್ಸ್ ಮತ್ತು ಗದಗ ವೈದ್ಕಕೀಯ ಕಾಲೇಜುಗಳಲ್ಲಿ ತಲಾ 50ರಂತೆ 150 ಸೀಟುಗಳು ಹೆಚ್ಚಳವಾಗಿವೆ.
ಬೆಂಗಳೂರಿನ ಬಿಜಿಎಸ್, ಈಸ್ಟ್ ಪಾಯಿಂಟ್, ಾರೂಕ್ ಅಕಾಡೆಮಿ, ಜೆಜಿಎಂಎಂಎಂಸಿ, ಮಂಗಳೂರಿನ ಕಣಚೂರು ವೈದ್ಯಕೀಯ ಕಾಲೇಜು ಸೇರಿ ವಿವಿಧ 19 ಸಂಸ್ಥೆಗಳು ಸೇರಿ ಒಟ್ಟು 1,150 ಸೀಟುಗಳು ಹೆಚ್ಚಳವಾಗಿರುವುದು ರಾಷ್ಟ್ರೀಯ ವೈದ್ಯಕೀಯ ಪರಿಷತ್ತು (ಎನ್‌ಎಂಸಿ) ಪ್ರಕಟಿಸಿರುವ ಸೀಟ್ ಮ್ಯಾಟ್ರಿಕ್ಸ್‌ನಲ್ಲಿ ಲಭ್ಯವಾಗಿದೆ.

ವೈದ್ಯಕೀಯ ಕಾಲೇಜಲ್ಲಿ ರಾಜ್ಯವೇ ನಂ.1:

ರಾಜ್ಯದಲ್ಲಿ 24 ಸರ್ಕಾರಿ ಮತ್ತು 51 ವೈದ್ಯಕೀಯ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ದೇಶಾದ್ಯಂತ ಅತಿ ಹೆಚ್ಚು ವೈದ್ಯಕೀಯ ಸೀಟುಗಳಿರುವುದು ಕರ್ನಾಟಕದಲ್ಲಿಯೇ ಎಂಬ ದಾಖಲೆಯನ್ನು ಹೊಂದಿದೆ. ರಾಜ್ಯದ ನಂತರದ ಸ್ಥಾನದಲ್ಲಿ ಇಲ್ಲಿಯವರೆಗೂ ತಮಿಳುನಾಡು ಎರಡನೇ ಸ್ಥಾನದಲ್ಲಿತ್ತು. ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶ ಹಾಗೂ ನಾಲ್ಕನೇ ಸ್ಥಾನದಲ್ಲಿ ಮಹಾರಾಷ್ಟ್ರವಿದೆ.
ನೀಟ್ ಲಿತಾಂಶ ಬಳಿಕ ವೇಳಾಪಟ್ಟಿ
ಶೀಘ್ರವೇ ನೀಟ್ ಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ. ಅದಾದ ಬಳಿಕ ಮೊದಲ ಸುತ್ತಿನಲ್ಲಿ ರಾಷ್ಟ್ರಮಟ್ಟದ ಸೀಟು ಹಂಚಿಕೆ ನಡೆಯಲಿದೆ. ರಾಜ್ಯದ ಸೀಟುಗಳ ಹಂಚಿಕೆಗಾಗಿ ಕೆಇಎ ಕೂಡ ವೇಳಾಪಟ್ಟಿ ಪ್ರಕಟಿಸಲಿದೆ.

ಅತಿ ಹೆಚ್ಚು ಸೀಟು ಹೊಂದಿರುವ ರಾಜ್ಯಗಳು

ರಾಜ್ಯ ಸೀಟು
ಕರ್ನಾಟಕ 15,395
ಉತ್ತರ ಪ್ರದೇಶ 14,000
ತಮಿಳನಾಡು 13,999
ಮಹಾರಾಷ್ಟ್ರ 13,099

ಸೀಟು ಹೆಚ್ಚಳಕ್ಕೆ ಕಾರಣಗಳೇನು?

- ಈ ಹಿಂದೆ ಹೊಸದಾಗಿ ಆರಂಭವಾದ ಕಾಲೇಜುಗಳ ಸೀಟು ಹೆಚ್ಚಳಕ್ಕೆ 4ರಿಂದ 5 ವರ್ಷ ಕಾಯಬೇಕಿತ್ತು. ಆದರೆ, ಈಗ ನಿಯಮಗಳ ಸರಳೀಕರಣ
- ಕಾಲೇಜು ಆರಂಭವಾದ ಮರು ವರ್ಷವೇ ಸೀಟುಗಳ ಸಂಖ್ಯೆ ಹೆಚ್ಚಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ
"

ರಾಜ್ಯದಲ್ಲಿ ಈ ಬಾರಿ ಎರಡು ಹೊಸ ಕಾಲೇಜುಗಳು ಮತ್ತು ಹಳೆಯ ಕಾಲೇಜುಗಳಲ್ಲಿ ನವೀಕರಣಗೊಂಡ ಕಾಲೇಜುಗಳು ಸೇರಿ ಒಟ್ಟು 1,300 ಸೀಟುಗಳು ಹೆಚ್ಚಳವಾಗಲಿವೆ.

— - ಡಾ. ಸುಜಾತಾ ರಾಥೋಡ್, ವೈದ್ಯಕೀಯ ಶಿಕ್ಷಣ ನಿರ್ದೇಶಕಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net