ನಗರದ ಪ್ರಮುಖ ರಸ್ತೆಗಳ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದ್ದು, ಫುಟ್ಪಾತ್ ಒತ್ತುವರಿ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪೌರಾಯುಕ್ತರು ಎಚ್ಚರಿಸಿದರು. ಬೆಸ್ಕಾಂನ ಯುಜಿ ಕೇಬಲ್ ಅಳವಡಿಕೆ ವಿಳಂಬದಿಂದಾಗಿ ಫುಟ್ಪಾತ್ ಕಾಮಗಾರಿ ತಡವಾಗಿತ್ತು. ಈಗ ಶಾಸಕರಿಂದ ಕ್ಲಿಯರೆನ್ಸ್ ಸಿಕ್ಕಿದ್ದು, ಸೋಮವಾರದಿಂದಲೇ ಕೇಬಲ್ ಕಾಮಗಾರಿ ಮುಗಿಸಿ ಫುಟ್ಪಾತ್ ನಿರ್ಮಾಣ ಪೂರ್ಣಗೊಳಿಸಲಾಗುವುದು. ಬೆಂಗಳೂರಿನಲ್ಲಿ ಕೈಗೊಂಡಿರುವ ಒತ್ತುವರಿ ಮುಕ್ತ ಮಾದರಿಯನ್ನೇ ಇಲ್ಲೂ ಜಾರಿ ಗೊಳಿಸಲಾಗುವುದು. ಸುಪ್ರೀಂಕೋರ್ಟ್ ಆದೇಶದಂತೆ ಫುಟ್ಪಾತ್ ಸಾರ್ವಜನಿಕರ ಸಂಚಾರಕ್ಕೆ ಮಾತ್ರ ಮೀಸಲು. ನಗರದ ಬಾಗೇಪಲ್ಲಿ ಸರ್ಕಲ್ನಲ್ಲಿ ಫುಟ್ಪಾತ್ ಒತ್ತುವರಿಯಿಂದಾಗಿ ಪೊಲೀಸ್ ಪೇದೆಯೊಬ್ಬರು ಮೃತಪಟ್ಟ ಟನೆಯನ್ನು ಸಾರ್ವಜನಿಕರು ಮರೆಯಬಾರದು. ಇನ್ನು ಮುಂದೆ ಒತ್ತುವರಿ ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ಸಾಮಗ್ರಿಗಳನ್ನು ಗುಜರಿಗೆ ಹಾಕಲಾಗುವುದು, ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.