10.52 ಲಕ್ಷ ರೂ. ಪರಿಹಾರ| ವಿದ್ಯುತ್ ಅವಘಡ ಪ್ರಕರಣದಲ್ಲಿ ಹೈಕೋರ್ಟ್​ ಆದೇಶ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್​ ಅವಡದಿಂದ ಬಾಲಕ ಮೃತಪಟ್ಟ ಪ್ರಕರಣ
ಬೆಂಗಳೂರು: ವಿದ್ಯುತ್​ ಕಂಬದಲ್ಲಿ ಸಿಲುಕಿದ್ದ ಗಾಳಿಪಟ ಬಿಡಿಸುವಾಗ ಹೈಟೆನ್ಷನ್​ ವಿದ್ಯುತ್​ ತಂತಿ ತಾಕಿ ಮೃತಪಟ್ಟಿದ್ದ 11 ವರ್ಷದ ಬಾಲಕನ ಪಾಲಕರಿಗೆ 10.52 ಲಕ್ಷ ರೂಪಾಯಿ ಪರಿಹಾರ ನೀಡಲು ಹುಬ್ಬಳ್ಳಿ ವಿದ್ಯುತ್​ ಸರಬರಾಜು ಕಂಪನಿಗೆ (ಹೆಸ್ಕಾಂ) ಹೈಕೋರ್ಟ್​ ಆದೇಶಿಸಿದೆ.
ಬಾಲಕನ ಸ್ವಂತ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂಬ ಹೆಸ್ಕಾಂನ ವಾದವನ್ನು ಪರಿಗಣಿಸಿ ಪರಿಹಾರ ನೀಡಲು ನಿರಾಕರಿಸಿದ್ದ ಲೋಕ ಅದಾಲತ್​ನ ಆದೇಶವನ್ನು ಪ್ರಶ್ನಿಸಿ ಬಾಲಕನ ಪಾಲಕರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸಚಿನ್​ ಶಂಕರ್​ ಮಗದುಮ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಅರ್ಜಿಯನ್ನು ಹೈಕೋರ್ಟ್​ನ ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಲಾಗಿತ್ತು.
ವಿದ್ಯುತ್​ ಉತ್ಪಾದನೆ, ಪ್ರಸರಣದ ಜವಾಬ್ದಾರಿ ಹೊಂದಿರುವ ಸಂಸ್ಥೆಗಳು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸಬೇಕು.ವಿದ್ಯುತ್​ ಕಂಬಗಳ ಸ್ಥಾಪನೆ ಮತ್ತು ಹೈಟೆನ್ಷನ್​ ತಂತಿಗಳನ್ನು ಎಳೆಯುವುದರಿಂದ ವಿದ್ಯುತ್​ ಸರಬರಾಜು ಕಂಪನಿಯ ಹೊಣೆಗಾರಿಕೆ ಮುಗಿಯುವುದಿಲ್ಲ. ಅದರ ಸುತ್ತಲೂ ಜನರು ಅಪಾಯಕ್ಕೆ ಸಿಲುಕದಂತೆ ಬೇಲಿ ಹಾಕುವುದು ಸೇರಿ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಪಾಯಕಾರಿ ವ್ಯವಸ್ಥೆಗಳ ಮೇಲೆ ನಿಯಂತ್ರಣ ಹೊಂದಿರುವ ವಿದ್ಯುತ್​ ಕಂಪನಿಗಳು ಈ ಬಗ್ಗೆ ಗಂಭೀರವಾಗಿಬೇಕು ಎಂದು ನ್ಯಾಯಪೀಠ ವಿವರಿಸಿದ್ದು, ಪರಿಹಾರ ಪಾವತಿಸಲು ಆದೇಶಿಸಿದೆ.
2012ರ ಘಟನೆ:
ಬೆಳಗಾವಿಯ ಮಾರಿಹಾಳ ನಿವಾಸಿಗಳಾದ ಗುಡದಪ್ಪ ರುದ್ರಪ್ಪ ತಳವಾರ ಮತ್ತು ರೇಣುಕಾ ದಂಪತಿಯ 11 ವರ್ಷದ ಪುತ್ರ ರಚಿ ತಳವಾರ, ಜಾನುವಾರು ಮೇಯಿಸುತ್ತಿದ್ದ ಸಂದರ್ಭದಲ್ಲಿ ವಿದ್ಯುತ್​ ಕಂಭದಲ್ಲಿ ಸಿಲುಕಿದ್ದ ಗಾಳಿಪಟವನ್ನು ನೋಡಿ, ಅದನ್ನು ಬಿಡಸಲು ಪ್ರಯತ್ನಿಸಿದ್ದ. ಈ ವೇಳೆ ವಿದ್ಯುತ್​ ಶಾಕ್​ ಹೊಡೆದು 2012ರ ಸೆ.11ರಂದು ಮೃತಪಟ್ಟಿದ್ದ. ಮಗನ ಸಾವಿನ ಬಳಿಕ ಪರಿಹಾರ ನೀಡುವಂತೆ ಹೆಸ್ಕಾಂ ಅನ್ನು ಪಾಲಕರು ಕೋರಿದ್ದರು. ಈ ಮನವಿಯನ್ನು ಹೆಸ್ಕಾಂ ಮತ್ತು ಲೋಕ ಅದಾಲತ್​ನಲ್ಲಿ ತಿರಸ್ಕರಿಸಲಾಗಿದ್ದ ಕಾರಣ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು.

ಮಕ್ಕಳಲ್ಲಿ ಕುತೂಹಲ ಸಹಜ

11 ವರ್ಷದ ಮಗುವಿನ ನಿರ್ಲಕ್ಷ್ಯವನ್ನು ವಯಸ್ಕರಿಗೆ ಸಮಾನವಾಗಿ ಪರಿಗಣಿಸಿ ಪರಿಹಾರ ನಿರಾಕರಿಸಲಾಗದು. ಮಕ್ಕಳಲ್ಲಿ ಕುತೂಹಲ ಸಹಜವಾಗಿದ್ದು, ವಯಸ್ಕರು ನಿರ್ಲಕ್ಷಿಸುವ ಗಾಳಿಪಟ, ಮರಗಳು ಮತ್ತು ವಿದ್ಯುತ್​ ಕಂಬಗಳ ಕಡೆಗೆ ಸಹಜ ಆಕರ್ಷಣೆ ಇರುತ್ತದೆ. ಆದ್ದರಿಂದ ಹೈಟೆನ್ಷನ್​ ತಂತಿಗಳ ಕಂಬ ಇರುವಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದ್ದದ್ದು, ಹೆಸ್ಕಾಂನ ಜವಾಬ್ದಾರಿ. ಹಾಗಿರುವಾಗ, ಬಾಲಕನ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಪರಿಹಾರ ನಿರಾಕರಿಸಲಾಗದು ಎಂದು ನ್ಯಾಯಪೀಠ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net