

ಬೆಂಗಳೂರು: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಖಾ, ಪಾನ್ ಮಸಾಲಾ ಉತ್ಪನ್ನಗಳ ಮೇಲೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಷೇಧ ಹೇರಿದೆ.
ಒಂದು ವರ್ಷದ ಅವಧಿಗೆ ಇವುಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಈ ಕುರಿತು ಆ.10ರಂದು ಆದೇಶ ಹೊರಡಿಸಿದೆ. ಜನರ ಆರೋಗ್ಯ ಕಾಪಾಡುವ ಸಲುವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಕಲಂ 30(2)(ಚ) ಹಾಗೂ (ಮಾರಾಟದ ಮೇಲಿನ ನಿಷೇಧ ಮತ್ತು ನಿರ್ಬಂಧಗಳು) 2011ರ ನಿಯಮಗಳಡಿ ಈ ಕ್ರಮ ಕೈಗೊಳ್ಳಲಾಗಿದೆ.
ಗುಟ್ಖಾ, ಪಾನ್ ಮಸಾಲಾ ಜತೆಗೆ ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಇತರ ಉತ್ಪನ್ನಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುವುದಕ್ಕೂ ನಿಷೇಧ ಹೇರಲಾಗಿದೆ. ಇದಲ್ಲದೆ ಪೊಟ್ಟಣಗಳಲ್ಲಿ ಮಾಡಲ್ಪಟ್ಟ ಹಾಗೂ ಮಾಡಲ್ಪಡದಿರುವ, ಗ್ರಾಹಕರು ಸುಲಭವಾಗಿ ಮಿಶ್ರಣ ಮಾಡಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಮಾರಾಟ ಅಥವಾ ವಿತರಣೆ ಮಾಡುವುದಕ್ಕೂ ನಿಷೇಧ ಅನ್ವಯಿಸಲಿದೆ.
ಸಂಗ್ರಹವೂ ನಿಷಿದ್ಧ: ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಖಾ ಮತ್ತು ಪಾನ್ ಮಸಾಲಾವನ್ನು ಸ್ಯಾಶೆ, ಪೌಚ್, ಪೊಟ್ಟಣ ಹಾಗೂ ಕಂಟೇನರ್ ಸೇರಿ ಯಾವುದೇ ವಿಧಾನಗಳಲ್ಲಿ ಸಂಗ್ರಹಿಸುವ ಮತ್ತು ಮಾರಾಟ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಇಲಾಖೆ ತಿಳಿಸಿದೆ. ಇದರ ಬೆನ್ನಲ್ಲೇ ಅಡಿಕೆ ಬೆಳೆವ ಜಿಲ್ಲೆಗಳಿಗೆ ಆರ್ಥಿಕ ನಷ್ಟದ ಆಘಾತ ಎದುರಾಗಿದೆ.
ಕಾರವಾರ: ತಂಬಾಕು ಹಾಗೂ ನಿಕೋಟಿನ್ ಉತ್ಪನ್ನಗಳ ಮೇಲಿನ ನಿಷೇಧದಿಂದಾಗಿ ಅಡಿಕೆ ಬೆಳೆಯುವ ಜಿಲ್ಲೆಗಳ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬೀಳುವ ಆತಂಕ ಎದುರಾಗಿದೆ. ಗುಟ್ಕಾದಲ್ಲಿ ಅಡಿಕೆ ಬಳಕೆಯಾಗುವುದರಿಂದ ಅದರ ಬೆಲೆಯ ಮೇಲೆ ಪರಿಣಾಮ ಬೀರಲಿದೆ. ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ 86 ಸಾವಿರ ಹೆಕ್ಟೇರ್ನಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, 80 ಸಾವಿರ ರೈತರು ಇದೇ ಬೆಳೆಯ ಮೇಲೆ ಅವಲಂಬಿತರಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಬೆಳೆ ಪ್ರದೇಶ ವಿಸ್ತರಣೆಯಾಗುತ್ತಿದೆ. ಪಕ್ಕದ ಹಾವೇರಿ ಜಿಲ್ಲೆಯ ಕೆಲ ತಾಲೂಕುಗಳಲ್ಲಿಯೂ ಅಡಿಕೆ ಕ್ಷೇತ್ರ ಬೆಳೆಯುತ್ತಿದೆ. ಸಹಕಾರ ಸಂಘಗಳು, ಸಂಸ್ಕರಣಾ ಘಟಕಗಳು ಸೇರಿದಂತೆ ಅಡಿಕೆ ಬೆಳೆಯಿಂದ ಲಕ್ಷಾಂತರ ಉಪ ಉದ್ಯೋಗವೂ ಸೃಷ್ಟಿಯಾಗಿದೆ. ಜಿಲ್ಲೆಯ ಒಟ್ಟಾರೆ ಆರ್ಥಿಕ ವಹಿವಾಟಿನ ಬಹು ಭಾಗವನ್ನು ಅಡಿಕೆ ವಹಿವಾಟು ನೀಡುತ್ತದೆ. ಹಾಗಾಗಿ ಅಡಿಕೆ ಬೆಲೆಯ ವ್ಯತ್ಯಾಸ ಜಿಲ್ಲೆಯ ಅರ್ಧ ಭಾಗದ ವ್ಯಾಪಾರ, ವ್ಯವಹಾರಗಳ ಮೇಲೂ ಉಂಟಾಗುತ್ತದೆ.
ಎರಡು ದಶಕದ ಈಚೆಗೆ ಅಡಿಕೆ ಬೆಳೆ ಅರ್ಧ ರಾಜ್ಯಕ್ಕೆ ವಿಸ್ತರಿಸಿದೆ. 400 ಕೋಟಿ ರೂ.ಗೂ ಹೆಚ್ಚು ಜಿಎಸ್ಟಿ ಇದರಿಂದ ಸಂಗ್ರಹವಾಗುತ್ತಿದೆ. ಹಾಗಾಗಿ ಗುಟ್ಖಾ ನಿಷೇಧದ ನಿರ್ಧಾರ ಪ್ರಕಟಿಸುವ ಸರ್ಕಾರ ಇಲ್ಲಿನ ಲಕ್ಷಾಂತರ ರೈತರ ಮೇಲಾಗುವ ಪರಿಣಾಮದ ಬಗ್ಗೆಯೂ ಗಮನ ಹರಿಸಬೇಕಿದೆ ಎಂಬುದು ಶಿರಸಿ ಟಿ.ಎಸ್.ಎಸ್. ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅವರ ಆಗ್ರಹ. ರಾಜ್ಯದ ಚಾಲಿ ಅಥವಾ ಬಿಳಿ ಅಡಿಕೆ ಬಹುಪಾಲು ಉತ್ತರ ಭಾರತಕ್ಕೆ ಮಾರಾಟವಾಗುವುದರಿಂದ ಗುಟ್ಕಾ ನಿಷೇಧದ ಪರಿಣಾಮ ಅದರ ಮೇಲೆ ತಕ್ಷಣಕ್ಕೆ ಆಗಲಿಕ್ಕಿಲ್ಲ. ಆದರೆ, ಕೆಂಪಡಿಕೆ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಬಹುದು. ಈ ಸಂಬಂಧ ಅಡಿಕೆ ಮಹಾ ಮಂಡಳದ ಸಭೆಯನ್ನು ತುರ್ತಾಗಿ ಕರೆದು ರ್ಚಚಿಸಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಗುಟ್ಖಾ, ಪಾನ್ ಮಸಾಲಾ ಸೇರಿ ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ಮಾರಾಟ, ವಿತರಣೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರು ಮತ್ತು ವ್ಯಾಪಾರಿಗಳ ಹಿತಾಸಕ್ತಿಗೆ ಧಕ್ಕೆಯಾಗದಂತೆ ಸರ್ಕಾರ ಸ್ಪಷ್ಟ ಹಾಗೂ ನಿಸ್ಸಂದಿಗ್ಧ ಜಾರಿ ಚೌಕಟ್ಟು ರೂಪಿಸಬೇಕು. ನಿಷೇಧದ ಜಾರಿ ಕ್ರಮಗಳು ನಿಷೇಧಿತ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿರಬೇಕೇ ಹೊರತು, ಅಡಿಕೆಯ ಕಾನೂನುಬದ್ಧ ಬೆಳೆ, ಸಂಗ್ರಹಣೆ, ಸಂಸ್ಕರಣೆ ಅಥವಾ ವ್ಯಾಪಾರಕ್ಕೆ ಯಾವುದೇ ಪರೋಕ್ಷ ನಿರ್ಬಂಧ ಅಥವಾ ತೊಂದರೆ ಉಂಟುಮಾಡಬಾರದು.
| ಎಸ್.ಆರ್.ಸತೀಶ್ಚಂದ್ರ ಕ್ಯಾಂಪ್ಕೊ ಅಧ್ಯಕ್ಷ