

ಬೆಂಗಳೂರು: ಮೂರು ಗೋವುಗಳ ಕೆಚ್ಚಲು ಕೊಯ್ದು ಘಟನೆಯು ಹಿಂದುಗಳಿಗೆ ಆಘಾತ ಉಂಟು ಮಾಡಿದೆ. ಈ ದುಷ್ಕೃತ್ಯವನ್ನು ಖಂಡಿಸಿ, ಸರಿಯಾದ ತನಿಖೆಗೆ ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಂತ ಪ್ರತಿಭಟನೆ ನಡೆಸಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ದಾನಿಗಳು ಪಶು ಆಸ್ಪತ್ರೆಗೆಂದು ನೀಡಿದ ಜಾಗ, ಕಟ್ಟಡವನ್ನು ವಕ್ಫ್ ಮಂಡಳಿಗೆ ನೀಡಲು ಸರ್ಕಾರ ಮುಂದಾಗಿದೆ. ಈ ಕ್ರಮದ ವಿರುದ್ಧ ಬಿಜೆಪಿ ಹೋರಾಟ ನಡೆಸಿದ್ದು, ಹಸುಗಳ ಮಾಲೀಕ ಕೂಡ ಇದರಲ್ಲಿ ಭಾಗವಹಿಸಿದ್ದರು.
ಆಯಕಟ್ಟಿನ ಸ್ಥಳದಲ್ಲಿರುವ ಬಹು ಕೋಟಿ ರೂ. ಮೌಲ್ಯದ ಜಾಗ ಲಪಟಾಯಿಸುವ ಹುನ್ನಾರ ನಡೆದಿದ್ದು, ಹಸುಗಳ ಕೆಚ್ಚಲು ಕೊಯ್ದು ಹಸುಗಳ ಮಾಲೀಕ ಸೇರಿ ಹಿಂದುಗಳಿಗೆ ಭಯಬೀಳಿಸಲು ಹೀನಕೃತ್ಯ ಎಸಗಲಾಗಿದೆ ಎಂದು ಆರೋಪಿಸಿದರು.
ಪಾಶವಿ ಕೃತ್ಯದ ವಿರುದ್ಧ ಜನರ ಆಕ್ರೋಶ, ಬಿಜೆಪಿ ಒತ್ತಡ ಹೆಚ್ಚುತ್ತಿದ್ದಂತೆಯೇ ಯಾರೋ ಒಬ್ಬರನ್ನು ಬಂಧಿಸಿ ಆತನೇ ಈ ಕೃತ್ಯ ಎಸಗಿದವ, ಮಾನಸಿಕ ಅಸ್ವಸ್ಥ ಎಂದು ಬಿಂಬಿಸಲಾಗುತ್ತಿದೆ. ಒಬ್ಬ ವ್ಯಕ್ತಿಯು ಇಂತಹ ದುಷ್ಕೃತ್ಯ ಎಸಗಲು ಸಾಧ್ಯವಿಲ್ಲ ಎಂಬ ಶಂಕೆ ವ್ಯಕ್ತಪಡಿಸಿದರು.
ಮಕರ ಸಂಕ್ರಮಣ, ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ವೇಳೆ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು, ಕರ್ಣನಿಗೆ ಹಸುಗಳನ್ನು ತೆಗೆದುಕೊಂಡು ಹೋಗುವಂತೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಡ ಹೇರಿದ್ದಾರೆ ಎಂದು ಗೊತ್ತಾಗಿದೆ.
ಹಸುಗಳ ಮಾಲೀಕ ಬಡ ಕರ್ಣನಿಗೆ ಪಕ್ಷದಿಂದ ಒಂದು ಲಕ್ಷ ರೂ. ಪರಿಹಾರ ನೀಡಿದ್ದೇವೆ. ಪ್ರಕರಣದ ತನಿಖೆ ಸರಿಯಾಗಿ ನಡೆಯಲಿ ಎಂಬುದು ಹಿಂದುಗಳು ಒತ್ತಾಸೆಯಾಗಿದೆ. ಬಂಧಿತ ಆರೋಪಿಯು ಮಾನಸಿಕ ಅಸ್ವಸ್ಥನಾಗಿದ್ದರೆ 10 ವರ್ಷಗಳಿಂದ ್ಯಾಕ್ಟರಿಯಲ್ಲಿ ಕೆಲಸ ಮಾಡಲು ಸಾಧ್ಯವೆ ? ಎಂದು ಆರ್.ಅಶೋಕ್ ಕೇಳಿದರು.
ಕಾಂಗ್ರೆಸ್‌ನ ಮತಬ್ಯಾಂಕ್ ರಾಜಕಾರಣಕ್ಕೆ ನಾವ್ಯಾರು ಹೆದರುವುದಿಲ್ಲ. ಈ ಘಟನೆ ಖಂಡಿಸಿ, ತನಿಖೆ ಸರಿಯಾಗಿ ನಡೆಯಲಿ ಎಂದು ಆಗ್ರಹಿಸಿ ರಾಜ್ಯಾದ್ಯಂತ ಬಿಜೆಪಿ ಹೋರಾಟ ನಡೆಸುವುದು ನಿಶ್ಚಿತ ಎಂದು ಪುನರುಚ್ಚರಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸದೆ ನೇರವಾಗಿ ಕೋರ್ಟ್ ಕಸ್ಟಡಿಗೆ ಒಪ್ಪಿಸಿದ್ದಾರೆ. ತನಿಖೆಯನ್ನು ನಿಲ್ಲಿಸಿದ್ದಾರೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮನದ ಹೊಸ್ತಿಲಲ್ಲಿರುವ ಸಿದ್ದರಾಮಯ್ಯ ಅವರು ಗೋಮಾತೆಗೆ ಮೋಸ ಮಾಡಬಾರದು. ನ್ಯಾಯಸಮ್ಮತ ತನಿಖೆಗೆ ಸೂಚಿಸಬೇಕು ಎಂದ ಆರ್.ಅಶೋಕ್, ಕಾಂಗ್ರೆಸ್ ಪಕ್ಷವೀಗ ಒಡೆದ ಮನೆಯಾಗಿದೆ ಎಂದು ವ್ಯಂಗ್ಯವಾಡಿದರು.