

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿ ದಸ್ತಾವೇಜು ನೋಂದಣಿಗೆ ಇ-ಸ್ವತ್ತು ತಂತ್ರಾಂಶದಿಂದ ಪಡೆದ ಇ-ಖಾತಾವನ್ನು ಕಡ್ಡಾಯ ಮಾಡುವ ಜತೆಗೆ ರಾಜ್ಯವ್ಯಾಪಿ ವಿಸ್ತರಿಸಿ ಕಂದಾಯ ಇಲಾಖೆ ಆದೇಶಿಸಿದೆ. ಸೆ.9ರಿಂದ ಚಾಮರಾಜನಗರ, ಚಿತ್ರದುರ್ಗ, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿತ್ತು. ಸೆ.23ರಿಂದ ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲೂ ಜಾರಿಗೆ ತರಲಾಗಿದೆ. ಉಳಿದ 18 ಜಿಲ್ಲೆಗಳ ನಗರಸಭೆ, ಪುರಸಭೆ ಮತ್ತು ಪಪಂ ವ್ಯಾಪ್ತಿಯ ಆಸ್ತಿಗಳಿಗೂ ಇನ್ಮುಂದೆ ಇ-ಖಾತಾ ಕಡ್ಡಾಯ. ಈ -ಖಾತಾ ಇದ್ದರಷ್ಟೇ ಅ.7ರಿಂದ ದಸ್ತಾವೇಜು ನೋಂದಣಿ ಪ್ರಕ್ರಿಯೆ ನಡೆಯಲಿದೆ.
ತಪ್ಪಿದರೆ ಕಾನೂನು ಕ್ರಮ: ಇ-ಸ್ವತ್ತು ತಂತ್ರಾಂಶ ಮತ್ತು ಕಾವೇರಿ 2.0 ಸಾಫ್ಟ್ವೇರ್ ಸಂಯೋಜನೆ ಮಾಡಲಾಗಿದೆ. ಆದ್ದರಿಂದ ಜನರು ತಮ್ಮ ಆಸ್ತಿಗಳಿಗೆ ಇ-ಸ್ವತ್ತಿನಲ್ಲಿ ಖಾತಾ ಪಡೆದ ಮೇಲಷ್ಟೇ ದಸ್ತಾವೇಜು ನೋಂದಣಿ ಪ್ರಕ್ರಿಯೆ ನಡೆಯಲಿದೆ. ಕೈಬರಹ ಅಥವಾ ಭೌತಿಕ ಖಾತಾ ಪಡೆದು ನೋಂದಣಿ ನಡೆಸಿದರೆ ಅಂತಹ ಸಬ್ ರಿಜಿಸ್ಟ್ರಾರ್, ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಇಲಾಖೆ ಎಚ್ಚರಿಕೆ ನೀಡಿದೆ. ಈ ತಿಂಗಳ ಅಂತ್ಯಕ್ಕೆ ರಾಜ್ಯವ್ಯಾಪಿ ಜಾರಿಗೆ ತರಲಾಗುತ್ತದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತ (ಪ್ರಭಾರ) ಕೆ.ಎ. ದಯಾನಂದ್ ಮಾಹಿತಿ ನೀಡಿದ್ದಾರೆ.
ಉದ್ದೇಶವೇನು?: ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸುವುದನ್ನು ತಡೆಯುವ ಉದ್ದೇಶಕ್ಕೆ ಸರ್ಕಾರದ ವೆಬ್ಸೈಟ್ಗಳಿಂದ ಮಾಹಿತಿ ಪಡೆದು ಆಸ್ತಿ ನೋಂದಣಿ ಪ್ರಕ್ರಿಯೆ ಕಡ್ಡಾಯ ಮಾಡಲಾಗುತ್ತಿದೆ.
ಸೆ.30ರಿಂದ ಸ್ಥಗಿತ: ಬಿಬಿಎಂಪಿ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಸೆ.30ರಿಂದ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಪರಿಣಾಮ ಶುಕ್ರವಾರ (ಸೆ.27) ಕೈಬರಹ ಖಾತಾ ಇರುವ ಆಸ್ತಿಗಳ ದಸ್ತಾವೇಜು ನೋಂದಣಿ ಕೊನೆ ಆಗಲಿದೆ. ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣ ಸೋಮವಾರದಿಂದ (ಸೆ.30) ಇ-ಸ್ವತ್ತು ತಂತ್ರಾಂಶದಿಂದ ಪಡೆದ ಇ-ಖಾತಾ ಇದ್ದಷ್ಟೇ ರಿಜಿಸ್ಟ್ರೇಷನ್ ನಡೆಯಲಿದೆ. ಈಗಾಗಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಡಾವಣೆ ಮತ್ತು ವಸತಿ ಯೋಜನೆಗಳ ಆಸ್ತಿಗಳಿಗೆ ಯುನಿಫೈಡ್ ಲ್ಯಾಂಡ್ ಮ್ಯಾನೇಜ್ಮೆಂಟ್ ಸಿಸ್ಟಂನಲ್ಲಿ (ಯುಎಲ್ಎಂಎಸ್) ಇ-ಖಾತಾ ನೀಡಲಾಗಿದೆ. ಯುಎಲ್ಎಂಎಸ್ ಸಾಫ್ಟ್ವೇರ್ನ್ನು ಕಾವೇರಿ 2.0 ತಂತ್ರಾಂಶಕ್ಕೆ ಸಂಯೋಜನೆ ಮಾಡಿದ್ದು, ಇಲ್ಲಿಂದಲೇ ಮಾಹಿತಿ ಪಡೆದು ಆಸ್ತಿಗಳ ನೋಂದಣಿ ನಡೆಸಬೇಕಾಗಿದೆ.
ಜನರ ಪರದಾಟ ಶುರು: ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳಿಗೆ ಇ-ಖಾತಾ ಇಲ್ಲದೆ ವಾರಸುದಾರರು, ಕಷ್ಟ ಕಾಲಕ್ಕೆ ಮಾರಾಟ ಮಾಡಲು ಮತ್ತು ಮಕ್ಕಳಿಗೆ ದಾನ, ವಿಲ್ ಮಾಡಲು ಪರದಾಡಬೇಕಾಗಿದೆ. ಇತ್ತ ಇ-ಖಾತಾ ನೀಡುತ್ತೆವೆ ಎಂದು ಹೇಳಿಕೊಳ್ಳುವ ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳು ಯಾವುದೇ ತಯಾರಿ ನಡೆಸಿಕೊಂಡಿಲ್ಲ. ಇ-ಖಾತಾ ವಿಚಾರ ತಿಳಿದ ಸಾರ್ವಜನಿಕರು ಗುರುವಾರ ಸಬ್ ರಿಜಿಸ್ಟ್ರಾರ್ ಕಚೇರಿಗಳತ್ತ ಮುಗಿಬಿದ್ದಿದ್ದಾರೆ. ಶುಕ್ರವಾರ ಮತ್ತು ಸೋಮವಾರ ಜನದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.
ಏನಿದು ಯೋಜನೆ?: 2006ರಲ್ಲಿ ಕೃಷಿ ಜಮೀನು ನೋಂದಣಿಗೆ ಭೂಮಿ ತಂತ್ರಾಂಶವನ್ನು ಕಾವೇರಿ ತಂತ್ರಾಂಶಕ್ಕೆ ಸಂಯೋಜಿಸಿ ಸರ್ವೆ ನಕ್ಷೆ (ಸ್ಕೆಚ್) ನಮೂನೆ-11ಇ ಕಡ್ಡಾಯ ಮಾಡಿ ಮೋಜಿಣಿ ಸಾಫ್ಟ್ವೇರ್ಗೆ ಲಿಂಕ್ ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯ ಕೃಷಿಯೇತರ ಸ್ವತ್ತುಗಳ ದಸ್ತಾವೇಜು ನೋಂದಣಿಗೆ ಇ-ಸ್ವತ್ತು ತಂತ್ರಾಂಶವನ್ನು ಕಾವೇರಿ ಸಾಫ್ಟ್ವೇರ್ಗೆ 2014ರಲ್ಲಿ ಲಿಂಕ್ ಮಾಡಲಾಗಿದೆ. ರಾಮನಗರ ಮತ್ತು ಕನಕಪುರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ವತ್ತುಗಳ ದಸ್ತಾವೇಜು ನೋಂದಣಿಗೆ ಇ-ಆಸ್ತಿ ತಂತ್ರಾಂಶ ಅಳವಡಿಸಿ ಕಾವೇರಿ 2.0ಕ್ಕೆ ಲಿಂಕ್ ಮಾಡಿ ಪ್ರಾಯೋಗಿಕವಾಗಿ ಜಾರಿ ತರಲಾಗಿತ್ತು.