

ಬೆಂಗಳೂರು:
ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ಬಳಿಕ 2ನೇ ಹಂತದ ಜಿಲ್ಲಾ ಪ್ರವಾಸ ನಡೆಸಲು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾರ್ಯಯೋಜನೆ ಸಿದ್ಧಪಡಿಸಿಕೊಂಡಿದ್ದಾರೆ.
ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಂಗಳೂರು, ಮೈಸೂರು, ಮಂಡ್ಯ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಶಿವಮೊಗ್ಗ, ಬೆಂಗಳೂರು ಜಿಲ್ಲಾ ಪ್ರವಾಸ ಮುಗಿಸಿರುವ ಅವರು, ಇನ್ನುಳಿದ ಜಿಲ್ಲೆಗೆ ಶೀಘ್ರವೇ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಲು ಕ್ರಮ ಕೈಗೊಂಡಿದ್ದಾರೆ.
ಮೊದಲ ಹಂತದಲ್ಲಿಯೇ ಕನಿಷ್ಠ 15 ಜಿಲ್ಲೆ ಪ್ರವಾಸ ಮಾಡಲು ಉದ್ದೇಶಿಸಿದ್ದ ವಿಜಯೇಂದ್ರ ಅವರಿಗೆ ವಿಧಾನಸಭೆ ಅಧಿವೇಶನ, ರಾಜ್ಯ ಪದಾಧಿಕಾರಿಗಳ ನೇಮಕ, ಜಿಲ್ಲಾಧ್ಯಕ್ಷರುಗಳ ನೇಮಕ ಪ್ರಕ್ರಿಯೆ, ಶ್ರೀರಾಮ ಮಂದಿರ ಉದ್ಘಾಟನಾ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮತ್ತು ನಿರಂತರ ಸಭೆಗಳ ಕಾರಣದಿಂದ ಹೆಚ್ಚು ಪ್ರವಾಸ ಮಾಡಲು ಸಾಧ್ಯವಾಗಲಿಲ್ಲ.
ಜ.27 ರಂದು ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಿಗಧಿಯಾಗಿದ್ದು, ಈ ಸಭೆ ಮುಗಿದ ಬಳಿಕ ಮತ್ತೆ ಜಿಲ್ಲಾ ಪ್ರವಾಸ ಪ್ರಾರಂಭಿಸಲು ಯೋಜಿಸಿದ್ದಾರೆ.
ಲೋಕಸಭಾ ಚುನಾವಣೆ ಹೊತ್ತಿಗೆ ಎಲ್ಲಾ ಜಿಲ್ಲೆಯ ಪ್ರವಾಸವನ್ನು ಮುಗಿಸಿ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಲು ವಿಜಯೇಂದ್ರ ಮುಂದಾಗಿದ್ದಾರೆ.