

ರಾಜ್ಯದಲ್ಲಿ ಮಳೆ ಆರ್ಭಟ ತಗ್ಗಿದೆಯಾದರೂ ಕೃಷ್ಣಾ, ತುಂಗಭದ್ರಾ ಹಾಗೂ ಇನ್ನಿತರ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಪ್ರವಾಹದ ಆತಂಕ ಮುಂದುವರಿದಿದೆ. ಬೆಳಗಾವಿ ಜಿಲ್ಲೆಯಲ್ಲಿ ಬುಧವಾರ ಬಿಸಿಲು ಗೋಚರಿಸಿದೆ. ಆದರೆ, ಕೃಷ್ಣಾ ಹಾಗೂ ಇನ್ನಿತರ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಅನೇಕ ಗ್ರಾಮಗಳು ಜಲಾವೃತಗೊಂಡಿವೆ. ಮಹಾರಾಷ್ಟ್ರ ಮತ್ತು ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯಲ್ಲಿ 9 ಸೇತುವೆ ಇನ್ನೂ ಜಲಾವೃತ ಸ್ಥಿತಿಯಲ್ಲೇ ಇದ್ದು, 20 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಬಳ್ಳಾರಿ ಜಿಲ್ಲೆಗೆ ನೆರೆ ಸಂಕಷ್ಟ
ತುಂಗಭದ್ರಾ ಜಲಾಶಯದಿಂದ 1,12,086 ಕ್ಯೂಸೆಕ್ ನೀರು ನದಿಗೆ ಬಿಟ್ಟಿದ್ದರಿಂದ ಹೊಸಪೇಟೆ, ಕಂಪ್ಲಿ, ಸಿರಗುಪ್ಪ ತಾಲೂಕಿನಲ್ಲಿ ಪ್ರವಾಹ ಸಂಕಷ್ಟ ಎದುರಾಗಿದೆ. ಹಂಪಿಯ ಪುರಂದರದಾಸರ ಮಂಟಪ, ವಿರೂಪಾಕ್ಷೇಶ್ವರ ದೇವಸ್ಥಾನ ಪಕ್ಕದ ಸ್ನಾನಘಟ್ಟಗಳು ಮುಳುಗಿವೆ. ರಾಮಲಕ್ಷ್ಮಣ ದೇವಸ್ಥಾನದ ಅಂಗಳದವರೆಗೆ ನೀರು ನುಗ್ಗಿದ್ದು, ಯಂತ್ರೋದ್ಧಾರಕ ದೇವಸ್ಥಾನಕ್ಕೆ ತೆರಳುವ ರಸ್ತೆಯೂ ಬಂದ್ ಆಗಿದೆ. ಕಂಪ್ಲಿಯಲ್ಲಿ ಕೋಟೆ ಪ್ರದೇಶದ 54 ಕುಟುಂಬದವರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ. ಕಂಪ್ಲಿ-ಗಂಗಾವತಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. 100.855 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 97.047 ಟಿಎಂಸಿ ನೀರಿದ್ದು, ಪ್ರವಾಹ ಹೆಚ್ಚುವ ಸಾಧ್ಯತೆ ಇದೆ.
ಯೆಲ್ಲೋ ಅಲರ್ಟ್: ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಮಳೆ ಮುಂದುವರಿದಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ವ್ಯಾಪಕ ಮಳೆ ಆಗಲಿರುವ ಕಾರಣ ಅಲ್ಲಿ ಮುಂದಿನ 2 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಳ್ಳರು ಬರುತ್ತಾರೆಂದು ಮನೇಲೇ ಉಳಿದಿದ್ದರು
ಹಿಡಕಲ್ ಜಲಾಶಯದಿಂದ ನೀರು ಬಿಡುತ್ತಿರುವುದರಿಂದ ಗೋಕಾಕದ ನೂರಾರು ಮನೆಗಳು ಜಲಾವೃತವಾಗಿವೆ. ತಾಲೂಕಿನ ಅಡಿಬಟ್ಟಿ ಗ್ರಾಮ ನಡುಗಡ್ಡೆಯಂತಾಗಿದ್ದು, ಜನರು ಸುರಕ್ಷಿತ ಸ್ಥಳಕ್ಕೆ ಹೋದರೆ ಗ್ರಾಮಕ್ಕೆ ಕಳ್ಳರು ನುಗ್ಗುತ್ತಾರೆಂದು 9 ಮಂದಿ ಗ್ರಾಮದಲ್ಲೇ ಇದ್ದರು. ಇವರೆಲ್ಲರೂ ಪ್ರವಾಹಕ್ಕೆ ಸಿಲುಕಿದ್ದು, ರಕ್ಷಣೆಗಾಗಿ ಮನೆಯೊಂದರ ಟೆರೇಸ್ ಮೇಲೆ ಕುಳಿತಿದ್ದಾರೆ. ಇವರ ರಕ್ಷಣೆಗೆ ಗೋಕಾಕ ತಾಲೂಕಾಡಳಿತ ಮುಂದಾಗಿದೆ.
2 ಸಾವು, ಇಬ್ಬರ ಶವ ಪತ್ತೆ
ಬೆಳಗಾವಿಯ ಸದಲಗಾದ ದತ್ತ ಚೌಕ್ ಬಳಿ ಮಳೆಯಿಂದಾಗಿ ಬುಧವಾರ ಮನೆ ಕುಸಿದು, ವೃದ್ಧ ಕಲ್ಲಪ್ಪ ರಾಮಾ ಪರಗೌಡರ (70) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಬಾಗೇವಾಡಿಯಲ್ಲಿ 32 ವರ್ಷದ ಲಕ್ಷ್ಮಿ ಮಂಗಳವಾರ ಸಂಜೆ ಕಟ್ಟಿಗೆ ತರಲು ಹೋದಾಗ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ರಾಯಚೂರು ಜಿಲ್ಲೆ ತೆಲಂಗಾಣದ ಪಂಚದೇವಪಾಡು ಬಳಿ ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿದ್ದರಿಂದ ನಾಪತ್ತೆಯಾಗಿದ್ದ ರಾಯಚೂರು ತಾಲೂಕಿನ ಕುರ್ವಕಲಾ ನಡುಗಡ್ಡೆಯ ನಾಲ್ವರ ಪೈಕಿ ಇಬ್ಬರು ಮಹಿಳೆಯರ ಶವ ಜುರಾಲಾ ಜಲಾಶಯದ ಹಿನ್ನೀರಿನಲ್ಲಿ ಬುಧವಾರ ಪತ್ತೆ ಆಗಿವೆ.
ಜನ-ಜಾನುವಾರು ಸ್ಥಳಾಂತರ
ಬಾಗಲಕೋಟೆ ಜಿಲ್ಲೆಯಲ್ಲಿ ಮಲಪ್ರಭಾ ಉಕ್ಕಿ ಹರಿಯುತ್ತಿರುವು ದರಿಂದ ಈಗಾಗಲೇ ಬಾದಾಮಿ ತಾಲೂಕಿನ 34 ಗ್ರಾಮಗಳು ಸಂಕಷ್ಟಕ್ಕೀಡಾಗಿದ್ದು, ಈ ಭಾಗದ ಹಲವಾರು ಸೇತುವೆಗಳು ತುಂಬಿ ಜಲಾವೃತಗೊಂಡಿವೆೆ. ಬಾದಾಮಿ- ಗದಗ ಮಾರ್ಗ ಮಧ್ಯದ ಚೊಳಚಗುಡ್ಡ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ಬರುವ ಗದಗ, ರೋಣ, ಗಜೇಂದ್ರಗಡ ಸೇರಿ ಈ ಭಾಗದ 50ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಸಂಪರ್ಕ ರಸ್ತೆ ಬಂದ್ ಆದಂತಾಗಿದೆ. ಜಮಖಂಡಿ ತಾಲೂಕಿನ ನದಿ ತೀರದ ಜನರಲ್ಲೂ ನಡುಕ ಶುರುವಾಗಿದೆ. ಕೃಷ್ಣೆಯ ಅಬ್ಬರದಿಂದ ಮುತ್ತೂರು, ಕಾತರ, ಹೊಂಡಾರ ಗುಹೇಶ್ವರ ನಡುಗಡ್ಡೆಗಳು ಜಲಾವೃತ ಗೊಂಡಿದೆ. ಶೂರ್ಪಾಲಿ, ತುಬಚಿ ಸೇರಿ ನದಿ ತೀರದ ಜನರು ಬೋಟ್ವುೂಲಕ ಸ್ಥಳಾಂತರ ಆಗುತ್ತಿದ್ದಾರೆ. ಅನೇಕರು ಜಾನುವಾರು, ಸರಕು ಸರಂಜಾಮುಗಳನ್ನು ಕಟ್ಟಿಕೊಂಡು ಬೇರೆಡೆ ಸ್ಥಳಾಂತರ ಆಗುತ್ತಿದ್ದಾರೆ.
ರಾಯಚೂರು ಜಿಲ್ಲೆಯಲ್ಲೂ ಆತಂಕ
ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.7 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ರಾಯಚೂರು ಜಿಲ್ಲೆಯ ಲಿಂಗಸುಗೂರು, ಸಿಂಧನೂರು, ಮಾನ್ವಿ ತಾಲೂಕಿನ ತುಂಗಭದ್ರಾ ನದಿ ತೀರದ ಹಳ್ಳಿಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಮಾನ್ವಿ ತಾಲೂಕು ಚೀಕಲಪರ್ವಿಯ ವಿಜಯದಾಸರ ಕಟ್ಟೆ ಹಾಗೂ ರಾಯಚೂರು ತಾಲೂಕಿನ ಎಲೆಬಿಚ್ಚಾಲಿಯ ರಾಯರ ಜಪದ ಕಟ್ಟೆ ಮುಳುಗುವ ಹಂತ ತಲುಪಿವೆ. ರೈತರು ನದಿಯಿಂದ ನೀರೆತ್ತಲು ಅಳವಡಿಸಿದ್ದ ಪಂಪ್ಸೆಟ್ಗಳನ್ನು ತೆರವುಗೊಳಿಸಿದ್ದಾರೆ. ಲಿಂಗಸುಗೂರು ತಾಲೂಕಿನ ಮ್ಯಾದರದೊಡ್ಡಿ ಪ್ರವಾಹಕ್ಕೆ ಸಿಲುಕಿದ್ದು, ಅಲ್ಲೇ ಉಳಿದಿದ್ದ 10 ಜನರ ಸ್ಥಳಾಂತಕ್ಕೆ ತಾಲೂಕು ಆಡಳಿತ ಬುಧವಾರ ನಡೆಸಿದ ಯತ್ನ ವಿಫಲವಾಗಿದೆ.
ದೆಹಲಿಯಲ್ಲಿ ಹೆಚ್ಚಿದ ಮಳೆ ಆರ್ಭಟ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ಭಾರಿ ಮಳೆಯಾಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಗಾಜಿಯಾಬಾದ್, ನೋಯ್ಡಾ ಸೇರಿ ಹಲವೆಡೆ ರಸ್ತೆಗಳು ಜಲಾವೃತವಾಗಿದ್ದವು. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ಟ್ರಾಫಿಕ್ ಸಮಸ್ಯೆ ತಲೆದೋರಿದೆ. ಹರಿಯಾಣದಲ್ಲೂ ಮಳೆ ಆರ್ಭಟ ಹೆಚ್ಚಾಗಿದೆ. ಬಹುತೇಕ ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ದೆಹಲಿ-ಗುರುಗ್ರಾಮ ಎಕ್ಸ್ಪ್ರೆಸ್ ಹೆದ್ದಾರಿಯಲ್ಲೂ ನೀರು ನಿಂತಿದ್ದು, ಟ್ರಾಫಿಕ್ ಜಾಮ್ ಆಗಿತ್ತು. ದೆಹಲಿ ಮತ್ತು ಸುತ್ತಮುತ್ತ ಲಿನ ರಾಜ್ಯಗಳಲ್ಲಿ ಆ.23ರವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ
ಮಲಪ್ರಭಾ ಪ್ರವಾಹದಿಂದ ನರಗುಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆದಿದ್ದ ಕೋಟ್ಯಂತರ ರೂ. ಮೌಲ್ಯದ ವಿವಿಧ ಬೆಳೆಗಳು ಹಾನಿಗೊಳಗಾಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಒಟ್ಟು 21,395 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆದಿದ್ದರು. ಅದರಲ್ಲಿ 1,049 ಹೆಕ್ಟೇರ್ ಹೆಸರು, 1,014 ಹೆ. ಗೋವಿನಜೋಳ, 993 ಹೆ. ಹತ್ತಿ, 46 ಹೆ. ಕಬ್ಬು, 46 ಹೆ. ಶೇಂಗಾ, 252 ಹೆ. ಸೂರ್ಯಕಾಂತಿ ಸೇರಿ ಒಟ್ಟು 3,500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.
ಸಂಕಷ್ಟಕ್ಕೆ ಸಿಲುಕಿದ ಕೋತಿಗಳು
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚಿಕ್ಕನಸಬಿ ಗ್ರಾಮದ ಬಳಿ ಮಲಪ್ರಭಾ ನದಿಯ ನಡುಗಡ್ಡೆಯಲ್ಲಿ 15-20 ಮಂಗಗಳು ಸಿಲುಕಿ ಹಾಕಿಕೊಂಡಿವೆೆ. 2 ದಿನಗಳಿಂದ ಆಹಾರವಿಲ್ಲದೆ ಜೀವನ್ಮರಣ ಹೋರಾಟ ನಡೆಸುತ್ತಿವೆ. ಇವುಗಳನ್ನು ರಕ್ಷಿಸಲು ಚಿಕ್ಕನಸಬಿ ಗ್ರಾಮಸ್ಥರು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು, ಅಮರಗೋಳ ಮಧ್ಯೆ ಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ ಕಳೆದ ಮೂರು ದಿನಗಳಿಂದ ಮಂಗಗಳು ಸಿಲುಕಿಕೊಂಡಿವೆ. ಆಹಾರ ಸಿಗದೆ ನರಕಯಾತನೆ ಅನುಭವಿಸುತ್ತಿವೆ. ನದಿ ಮಧ್ಯದಲ್ಲಿ ನಡುಗಡ್ಡೆಯಂತಾದ ಪ್ರದೇಶದಲ್ಲಿ ಮರಗಳ ತುದಿಯಲ್ಲಿ ಮಂಗಗಳು ಕುಳಿತು ರೋದಿಸುತ್ತಿವೆ. ಆದರೆ ಭೋರ್ಗರೆಯುತ್ತಿರುವ ಪ್ರವಾಹ ದಾಟಿ ಯಾರಿಗೂ ಹೋಗಲಾಗುತ್ತಿಲ್ಲ. ಹೇಗಾದರೂ ಪ್ರಯತ್ನಿಸಿ ಮಂಗಗಳನ್ನು ರಕ್ಷಿಸುವಂತೆ ಗ್ರಾಮಸ್ಥರು ಅಧಿಕಾರಿಗಳನ್ನು ಕೋರಿದ್ದಾರೆ.