4,251 ಪೌರಕಾರ್ವಿುಕರ ಹುದ್ದೆಗಳು ಖಾಲಿ; ಬೆಳಗಾವಿಯಲ್ಲಿ ಹೆಚ್ಚು, ಹಲವರಿಗೆ ಸೌಲಭ್ಯಗಳಿಲ್ಲ

civic workers
Published on

|ಹರೀಶ್ ಬೇಲೂರು

ಬೆಂಗಳೂರು: ರಾಜ್ಯದಲ್ಲಿ 4.251 ಪೌರಕಾರ್ವಿುಕರ ಹುದ್ದೆಗಳು ಖಾಲಿಯಿವೆ. ಸದ್ಯ 700 ಜನರಿಗೆ ಒಬ್ಬ ಪೌರಕಾರ್ವಿುಕ ಎಂದು ನಿಗದಿಯಾಗಿದ್ದು, ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಮರ್ಪಕವಾಗಿ ಸ್ವಚ್ಛತೆ ಕಾರ್ಯ ನಡೆಯದಿರುವ ಜತೆಗೆ ಕೇಂದ್ರ ಸರ್ಕಾರ ಪ್ರತಿ ವರ್ಷ ಹೊರಡಿಸುವ ‘ಸ್ವಚ್ಛ ನಗರಿ’ ಎಂಬ ಗರಿಮೆಗೆ ರಾಜ್ಯಕ್ಕೆ ಹಿನ್ನೆಡೆಯಾಗುತ್ತಿದೆ.

ರಾಜ್ಯದಲ್ಲಿ ಪ್ರಸ್ತುತ 61 ನಗರಸಭೆ, 123 ಪುರಸಭೆ ಹಾಗೂ 117 ಪಟ್ಟಣ ಪಂಚಾಯಿತಿಗಳಿವೆ. 16,732 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 5,794 ಕಾಯಂ ಪೌರಕಾರ್ವಿುಕರು, 6,687 ನೇರಪಾವತಿ, ದಿನಗೂಲಿ ಅಥವಾ ಗುತ್ತಿಗೆ ಪೌರಕಾರ್ವಿುಕರು ಸೇರಿ ಒಟ್ಟು 12,481 ಪೌರಕಾರ್ವಿುಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ 4.251 ಹುದ್ದೆಗಳು ಖಾಲಿಯಿವೆ. ರಾಜ್ಯದ ಇತರ ಜಿಲ್ಲೆಗಳಕ್ಕಿಂತ ಬೆಳಗಾವಿಯಲ್ಲಿ ಹೆಚ್ಚು 570 ಹುದ್ದೆಗಳು ಖಾಲಿಯಿವೆ. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 18 ಸಾವಿರ ಪೌರಕಾರ್ವಿುಕರಿದ್ದು, 1,500 ಮಂದಿ ಕಾಯಂ ಆಗಿ ಕೆಲಸ ಮಾಡುತ್ತಿದ್ದರೆ, ಉಳಿದವರು ಗುತ್ತಿಗೆ ಆಧಾರದಲ್ಲಿ ಸ್ಚಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.

ಜಿಲ್ಲಾವಾರು ಹುದ್ದೆ ಖಾಲಿ: ಬೆಳಗಾವಿ 570, ಬಳ್ಳಾರಿ 407, ಬೆಂಗಳೂರು 291, ಉತ್ತರ ಕನ್ನಡ 262, ರಾಯಚೂರು 249, ದಕ್ಷಿಣ ಕನ್ನಡ 218, ಗದಗ 206, ಬೀದರ್ 198, ಚಿತ್ರದುರ್ಗ 166, ಕೋಲಾರ 131, ವಿಜಯಪುರ 126, ಮೈಸೂರು 124, ಚಿಕ್ಕಬಳ್ಳಾಪುರ 121, ಕಲಬುರಗಿ 120, ಶಿವಮೊಗ್ಗ 118, ಯಾದಗಿರಿ 117, ಹಾವೇರಿ 117, ಹಾಸನ 106, ಬಾಗಲಕೋಟೆ 103,ಬೆಂಗಳೂರು ಗ್ರಾಮಾಂತರ 88, ತುಮಕೂರು 80, ರಾಮನಗರ 79, ಉಡುಪಿ 73, ದಾವಣಗೆರೆ 63,ಧಾರವಾಡ 50, ಕೊಪ್ಪಳ 33, ಚಾಮರಾಜನಗರ 20, ಕೊಡಗು 15, ಮಂಡ್ಯ 08, ಚಿಕ್ಕಮಗಳೂರು 08.

500 ಜನಕ್ಕೆ ಇರಬೇಕು: ರಾಜ್ಯದಲ್ಲಿ 700 ಜನಸಂಖ್ಯೆಗೆ ಒಬ್ಬ ಪೌರಕಾರ್ವಿುಕರನ್ನು ನಿಗದಿಗೊಳಿಸಲಾಗಿದೆ. ಆದರೆ, 500 ಜನಕ್ಕೆ ಒಬ್ಬರು ಇರಬೇಕೆಂಬ ನಿಯಮವಿದೆ. ಜನಸಂಖ್ಯೆ ಅನುಗುಣವಾಗಿ ಪೌರಕಾರ್ವಿುಕರು ಇಲ್ಲದಂತಾಗಿದೆ. ಕಾಯಂ ಪೌರಕಾರ್ವಿುಕರಿಗೆ ತಿಂಗಳಿಗೆ 30 ಸಾವಿರ ರೂ.ನಿಂದ 35 ಸಾವಿರ ರೂ.ವೇತನ ಸೇರಿ ಡಿ ದರ್ಜೆ ನೌಕರರಿಗೆ ದೊರೆಯುವ ಎಲ್ಲ ಸೌಲಭ್ಯಗಳು ಸಿಗುತ್ತದೆ. ಆದರೆ, ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ತಿಂಗಳಿಗೆ 13 ಸಾವಿರ ರೂ.ವೇತನ ನೀಡಲಾಗುತ್ತಿದೆ. ಕಾಯಂ ಸಿಬ್ಬಂದಿ ಮಾದರಿಯಲ್ಲಿ ಗುತ್ತಿಗೆ ಪೌರಕಾರ್ವಿುಕರು ಪ್ರತಿ ನಿತ್ಯ ಬೆಳಗ್ಗೆ ಸ್ವಚ್ಛತಾ ಮಾಡುತ್ತಿದ್ದೇವೆ. ವೇತನದಲ್ಲಿ ಕಡಿತಗೊಳ್ಳುವ ಇಎಸ್​ಐ, ಪಿಎಫ್ ಹೊರತುಪಡಿಸಿ ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ. ಅಲ್ಲದೆ, ಕೆಲ ಗುತ್ತಿಗೆದಾರರು ಇಎಸ್​ಐ ಹಾಗೂ ಪಿಎಫ್ ಪಾವತಿಸುತ್ತಿಲ್ಲ ಎಂದು ರಾಜ್ಯ ನಗರಪಾಲಿಕೆ ಪುರಸಭೆಗಳ ಗುತ್ತಿಗೆ ಪೌರಕಾರ್ವಿುಕರ ಸಂಘ ತಿಳಿಸಿದೆ.

ಕಡ್ಡಾಯ ಸೌಲಭ್ಯ: ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ಪೌರಕಾರ್ವಿುಕರಿಗೆ ವಿಶ್ರಾಂತಿ, ಗೃಹ, ಕುಡಿಯುವ ನೀರು, ಶೌಚಗೃಹ, ಪ್ರಥಮ ಚಿಕಿತ್ಸಾ, ಶುಚಿತ್ವ ಸೌಲಭ್ಯ, ಸಮವಸ್ತ್ರ, ಹ್ಯಾಂಡ್ ಗ್ಲೋವ್ಸ್, ಟೋಪಿ, ರಬ್ಬರ್ ಬೂಟುಗಳು, ಪಾದರಕ್ಷೆ, ಶುಚಿಗೊಳಿಸುವ ಸಾಧನ, ಕಸಬರಿಗೆ, ತರಿಮಣಿ, ಸಲಿಕೆ, ಮಾಸ್ಕ್, ಗಮೇಲ, ಕಳೆ ತೆಗೆಯುವ ಯಂತ್ರ, ಚರಂಡಿ ಶುಚಿಗೊಳಿಸುವ ಉಪಕರಣ, ಬಿದಿರಿನ ಬುಟ್ಟಿಗಳು, ತ್ಯಾಜ್ಯ ಸಾಗಾಣೆ ಬಂಡಿ, ಫಿನೈಲ್ ಹಾಗೂ ಬ್ಲಿಚಿಂಗ್ ಪೌಡರ್ ಸೇರಿ 22 ಸೌಲಭ್ಯಗಳನ್ನು ಒದಗಿಸಬೇಕು. ಆದರೆ, ಕೆಲವೆಡೆ ಸೌಲಭ್ಯಗಳು ವಂಚಿತದಿಂದ ಪೌರಕಾರ್ವಿುಕರ ಕೆಲಸ ಮಾಡುವಂತಾಗಿದೆ. ಅಲ್ಲದೆ, ಕೆಲ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ವಿುಕರಿಗೆ ತಿಂಗಳಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ಆರೋಪಗಳಿವೆ.

ವಿಶೇಷ ನೇಮಕಾತಿ ಮೂಲಕ ಒಂದು ಬಾರಿ ಪೌರಕಾರ್ವಿುಕರನ್ನು ಕಾಯಂ ಮಾಡಿಕೊಳ್ಳಲು ಅವಕಾಶವಿದೆ. ಕೆಲವಡೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅದರಂತೆ, 36 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಉಳಿದಡೆ ನೇಮಕಾತಿ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿವೆ. 2,148 ಪೌರಕಾರ್ವಿುಕರನ್ನು ಈವರೆಗೆ ವಿಶೇಷ ನೇಮಕಾತಿ ಮಾಡಿಕೊಳ್ಳಲಾಗಿದೆ.

|ಎಂಟಿಬಿ ನಾಗರಾಜು ಪೌರಾಡಳಿತ ನಿರ್ದೇಶನಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net