'ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುತ್ತಿವೆ' : ಕಾಂಗ್ರೆಸ್ ವಿರುದ್ಧ ಸಚಿವ ಅಶೋಕ್ ಕಿಡಿ

ashok
Published on

ಬೆಂಗಳೂರು : ಕರೊನಾ ಸಂಕಷ್ಟದಲ್ಲಿ ಒಟ್ಟಾಗಿ ಕೆಲಸ ಮಾಡಬೇಕಾದ ಸಮಯದಲ್ಲಿ ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುತ್ತಿವೆ ಎಂದು ರಾಜ್ಯ ಕಂದಾಯ ಸಚಿವ ಆರ್​.ಅಶೋಕ್ ಹೇಳಿದ್ದಾರೆ. ಕರೊನಾ ಸವಾಲುಗಳನ್ನೆದುರಿಸುತ್ತಾ ಪ್ರಧಾನಿ ಮತ್ತು ಕೇಂದ್ರದ ಮಂತ್ರಿಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ದೇಶದಲ್ಲಿ 20 ಸಾವಿರ ವೆಂಟಿಲೇಟರ್ ಬೆಡ್ ಇದ್ದವು. ಅದನ್ನೀಗ 80 ಸಾವಿರಕ್ಕೆ ಹೆಚ್ಚಿಸಲಾಗಿದೆ. ರಾಜ್ಯಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ 32 ಆಕ್ಸಿಜನ್ ಘಟಕಗಳನ್ನ ಆರಂಭ ಮಾಡಲಾಗುತ್ತಿದೆ. 7 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಪಿಪಿಇ‌ ಕಿಟ್, ಸ್ಯಾನಿಟೈಸರ್ ಉತ್ಪಾದನೆಗೆ ಪ್ರಧಾನಿ ಶ್ರಮ ವಹಿಸಿದ್ದಾರೆ. 20 ಸಾವಿರ ಕೋಟಿ ರೂ. ಹಣ ರೈತರ ಖಾತೆಗೆ ಜಮಾ ಮಾಡಲಾಗಿದೆ. ದೇಶದ ಸೇನೆ, ನೌಕಾಪಡೆ ಕೋವಿಡ್ ನಿಯಂತ್ರಣದಲ್ಲಿ ಸೇವೆ ಮಾಡುತ್ತಿವೆ. ರೈಲ್ವೆ ಕೋಚ್​​ಗಳಲ್ಲಿ 70 ಸಾವಿರ ಐಸೋಲೇಷನ್ ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದು ಅಶೋಕ್​ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಉಲ್ಲೇಖಿಸಿದರು.

"ರಾಜ್ಯದಲ್ಲಿ ನಿನ್ನೆ ಸಿಎಂ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಟೀಕೆ ಮಾಡುವ ಚಾಳಿಯನ್ನು ಮುಂದುವರೆಸಿದೆ. ಕಾಂಗ್ರೆಸ್ ಈ ಪ್ಯಾಕೇಜ್ ಬಗ್ಗೆಯೂ ಟೀಕೆ ‌ಮಾಡುತ್ತಿದೆ" ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಮಿಕ ಕಲ್ಯಾಣ ನಿಧಿಯಿಂದ ಹಣ ಬಳಕೆ ಮಾಡುತ್ತಿರುವ ಬಗ್ಗೆ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ. ಇದು ಕಾರ್ಮಿಕರ ಹಣ, ಇದನ್ನು ಅವರ ಕಲ್ಯಾಣಕ್ಕೆ ಬಳಸುತ್ತಿದ್ದೇವೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಕಾಂಗ್ರೆಸ್ ತನ್ನ ಶಾಸಕರ ಫಂಡ್ ಬಳಸಿ ನೂರು ಕೋಟಿ ಕೊಡುತ್ತಿದೆ. ಅದು ಕೂಡ ಸರ್ಕಾರದ ಹಣ. ಆದರೆ ಅವರ ಕೈಯಿಂದ ಹಣ ಕೊಟ್ಟ ಹಾಗೆ ಪ್ರಚಾರ ಪಡೆಯುತ್ತಿದ್ದಾರೆ. ಮೊದಲು ಅವರು ಸ್ವತಃ ದುಡ್ಡು ಕೊಟ್ಟು ಮಾತನಾಡಲಿ. ಕಳೆದ ಬಾರಿ ಕಾಂಗ್ರೆಸ್ ಕೊಟ್ಟ ಚೆಕ್ ಪಾಸ್ ಆಗಿಲ್ಲ ಎಂದು ಹರಿಹಾಯ್ದ ಅಶೋಕ್, "ಕಾಂಗ್ರೆಸ್​​ಗೆ ಅಧಿಕಾರದ ಹುಚ್ಚು. ಆದರೆ ಬಿಜೆಪಿಗೆ ಸೇವೆ ಮಾಡುವ ಕಳಕಳಿ ಇದೆ. ಕಾಂಗ್ರೆಸ್ ಅಪಪ್ರಚಾರ ಮಾಡುವುದು ಬಿಡಲಿ" ಎಂದು ಕಾಂಗ್ರೆಸ್​​ಗೆ ಟಾಂಗ್ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net