ಕ್ರೀಡಾ ಭಾರತಿ ಸಂಸ್ಥೆಯಿಂದ ಮೈಸೂರಿನಲ್ಲಿ ರಾಜ್ಯ ಮಟ್ಟದ ಸ್ಕೂಲ್ ಬ್ಯಾಂಡ್ ಸ್ಪರ್ಧಾಕೂಟ

Published on

ಮೈಸೂರು: ಕ್ರೀಡಾ ಭಾರತಿ ಸಂಸ್ಥೆಯಿಂದ ಜ.12ರಂದು ಬೆಳಗ್ಗೆ 9 ಗಂಟೆಗೆ ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ರಾಜ್ಯ ಮಟ್ಟದ ಸ್ಕೂಲ್ ಬ್ಯಾಂಡ್ ಸ್ಪರ್ಧಾಕೂಟ ಆಯೋಜಿಸಲಾಗಿದೆ ಎಂದು ಸಂಸ್ಥೆಯ ದಕ್ಷಿಣ ಭಾರತ ವಿಭಾಗದ ಕಾರ್ಯದರ್ಶಿ ಮಹೇಂದ್ರ ಪ್ರಸಾದ್ ತಿಳಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಜಿಲ್ಲಾ ಮಟ್ಟದಲ್ಲಿ ವಿಜೇತರಾದ 15 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ವಿದ್ಯಾಶಾಲೆಯ ಕರೆಸ್ಪಾಂಡೆಂಟ್ ಸ್ವಾಮಿ ಯುಕ್ತೇಶಾನಂದಜೀ ಮಹಾರಾಜ್ ಸಾನ್ನಿಧ್ಯ ವಹಿಸಲಿದ್ದು, ಸಂಸ್ಥೆಯ ಕ್ಷೇತ್ರೀಯ ಸಂಯೋಜಕ ಎ.ಎನ್.ಅಶೋಕ್ ಕಾರ್ಯಕ್ರಮ ಉದ್ಘಾಟಿಸುವವರು. ಸಂಸದ ಪ್ರತಾಪಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಹಿರಿಯ ಬ್ಯಾಂಡ್ ಶಿಕ್ಷಕರು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಉತ್ತಮ ಹತ್ತು ತಂಡಗಳಿಗೆ ಒಟ್ಟು 55 ಸಾವಿರ ರೂ. ನಗದು ಬಹುಮಾನ ದೊರೆಯಲಿದೆ. ಪ್ರಥಮ ಸ್ಥಾನಕ್ಕೆ 10 ಸಾವಿರ ರೂ. ಜತೆಗೆ ಟ್ರೋಫಿ ನೀಡಲಾಗುವುದು ಎಂದು ಹೇಳಿದರು.
ಸಂಸ್ಥೆಯ ಜಿಲ್ಲಾಧ್ಯಕ್ಷ ಅಮೃತ ಪುರೋಹಿತ್, ಖಜಾಂಚಿ ಪ್ರಶಾಂತ್, ಮಹಿಳಾ ಘಟಕದ ಕಾರ್ಯದರ್ಶಿ ಕಾವ್ಯಾ, ಸದಸ್ಯ ಆನಂದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net