

ಮೈಸೂರು: ರಾಜ್ಯ ಮಟ್ಟದ ಕಿರಿಯರ ಅಂತರ ಜಿಲ್ಲಾ ಮತ್ತು 23 ವರ್ಷದೊಳಗಿನ ಅಥ್ಲೆಟಿಕ್ಸ್ ಕ್ರೀಡಾಕೂಟದ ಮೂರನೇ ದಿನವೂ ನಾಲ್ಕು ನೂತನ ದಾಖಲೆ ನಿರ್ಮಾಣವಾಯಿತು.
ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ, ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯಿಂದ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದ ಸಿಂಥೆಟಿಕ್ ಟ್ರಾೃಕ್‌ನಲ್ಲಿ ಸೋಮವಾರ 23 ವರ್ಷದೊಳಗಿನ ಪುರುಷರ ವಿಭಾಗದ 1,500 ಮೀ. ಓಟ ಸ್ಪರ್ಧೆಯಲ್ಲಿ ಯಾದಗಿರಿಯ ಕೆ.ಲೋಕೇಶ್ ನೂತನ ದಾಖಲೆ ನಿರ್ಮಿಸಿದರು. 3:58.23 ನಿಮಿಷದಲ್ಲಿ ಓಟ ಪೂರೈಸುವ ಮೂಲಕ 2023ರಲ್ಲಿ ಬಿ.ಎಲ್.ಶಶಿಧರ್(4:00.70 ನಿ.) ನಿರ್ಮಿಸಿದ ದಾಖಲೆ ಮುರಿದರು.
ಹ್ಯಾಮರ್ ಥ್ರೋನಲ್ಲಿ ಕೊಪ್ಪಳದ ಸಚಿನ್ 57.24 ಮೀ. ಎಸೆಯುವ ಮೂಲಕ 2023ರಲ್ಲಿ ತಾವೇ ನಿರ್ಮಿಸಿದ್ದ (55.33 ಮೀ.) ದಾಖಲೆ ಅಂತರ ಹೆಚ್ಚಿಸಿಕೊಂಡರು. ಟ್ರಿಪಲ್ ಜಂಪ್‌ನಲ್ಲಿ ಮೈಸೂರಿನ ಯಶಸ್ ಆರ್.ಗೌಡ 15 ಮೀ. ದೂರ ಜಿಗಿಯುವ ಮೂಲಕ ಬಿ.ಮಹಾಂತ್(14.82 ಮೀ.) 2021ರಲ್ಲಿ ನಿರ್ಮಿಸಿದ್ದ ದಾಖಲೆ ಮುರಿದರು. ಡಿಸ್ಕಸ್ ಥ್ರೋನಲ್ಲಿ ದಕ್ಷಿಣ ಕನ್ನಡದ ಎ.ನಾಗೇಂದ್ರ 50.83 ಮೀ. ದೂರ ಎಸೆಯುವ ಮೂಲಕ 2022ರಲ್ಲಿ ಎಸ್.ಎ.ಮಹಮ್ಮದ್(50.20 ಮೀ.) ನಿರ್ಮಿಸಿದ ದಾಖಲೆ ಅಳಿಸಿದರು. 110 ಮೀ. ಹರ್ಡಲ್ಸ್ನಲ್ಲಿ ದಕ್ಷಿಣ ಕನ್ನಡದ ಅದ್ವಿತ್ ಡಿ.ಶೆಟ್ಟಿ ಪ್ರಥಮ ಸ್ಥಾನ ಪಡೆದರು.