ವಿಜಯೇಂದ್ರ ಎಚ್ಚರಿಕೆಗೆ ಬೆದರಿದ ರಾಜ್ಯ ಸರ್ಕಾರ !

P Rajeev
Published on

ಬೆಂಗಳೂರು: ಕರಸೇವಕ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ, ಬಿಡುಗಡೆಗೆ ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೀಡಿದ್ದ 48 ಗಂಟೆಗಳ ಗಡುವು, ಪ್ರತಿಭಟನೆ ಎಚ್ಚರಿಕೆಗೆ ರಾಜ್ಯ ಸರ್ಕಾರ ಬೆದರಿ, ಶ್ರೀಕಾಂತ ಪೂಜಾರಿ ಅವರನ್ನು ಬಿಡುಗಡೆಗೆ ವ್ಯವಸ್ಥೆ ಮಾಡಿದೆ ಎಂದು ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್‌ನಲ್ಲಿ ಶ್ರೀಕಾಂತ್‌ಗೆ ಜಾಮೀನು ಕೋರಿ ಸಲ್ಲಿಸಿದ ಅರ್ಜಿಗೆ ಸರ್ಕಾರದ ಪರ ವಕೀಲರು ತಕರಾರು ಸಲ್ಲಿಸದಂತೆ ಸರ್ಕಾರ ಸೂಚಿಸಿದೆ. ಇದರಿಂದಾಗಿ ಪೂಜಾರಿ ಅವರಿಗೆ ಬೇಲ್ ದೊರೆತಿದೆ ಎಂದು ಹೇಳಿದರು.

ಹಿಂದು ಕಾರ್ಯಕರ್ತರು, ರಾಮಭಕ್ತರ ವಿಷಯದಲ್ಲಿ ಬಿಜೆಪಿ ಎಂದಿಗೂ ಬೆನ್ನೆಲುಬಾಗಿದೆ. ಬರುವ ದಿನಗಳಲ್ಲಿ ಈ ಸರ್ಕಾರ ಎಂದೂ ಸಹ ತುಷ್ಟೀಕರಣ ಮಾಡಬಾರದು. ಒಂದು ಸಮುದಾಯದ ಪರ ಇರುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ಕೊಡುತ್ತಿರುವ ಎಚ್ಚರಿಕೆಯಿದಾಗಿದೆ ಎಂದರು.

ಬರ ಬಾಧೆಗೆ ತ್ವರಿತವಾಗಿ ಸ್ಪಂದಿಸಲಿ

ಬರಗಾಲ ಬಾಧಿತ ರೈತರಿಗೆ ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕು. ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ತೋರಿಸಿ ತಮ್ಮ ವೈಲ್ಯಗಳನ್ನು ಮುಚ್ಚಿಕೊಳ್ಳಲು ಸಿಎಂ ಸಿದ್ದರಾಮಯ್ಯ ಹವಣಿಸುತ್ತಿದ್ದಾರೆ ಎಂದು ಪಿ.ರಾಜೀವ್ ಟೀಕಿಸಿದರು.

ಕೇಂದ್ರ ಸರ್ಕಾರಕ್ಕೆ ಕೇಳಿದ ನೆರವು ನಿಯಮಾನುಸಾರ ಲಭಿಸಲಿದೆ. ಬಿಜೆಪಿ ಆಡಳಿತ ಕಾಲದಲ್ಲಿ ನೆರೆ ಬಂದಾಗ ಕೂಡಲೇ ಬೆಳೆ ನಷ್ಟ ಪರಿಹಾರ ನೀಡಲಾಗಿತ್ತು. ಕೇಂದ್ರ ಸರ್ಕಾರದ ಕಡೆಗೆ ಕೈ ತೋರಿಸಿ ಆಗಿನ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಕಾಲಹರಣ ಮಾಡಿದ್ದಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಬಜೆಟ್‌ನಲ್ಲಿ ನಿಗದಿಪಡಿಸಿದ ಗುರಿ ಪ್ರಕಾರ ತೆರಿಗೆ ಸಂಗ್ರಹಿಸಲು ಸಾಧ್ಯವಾಗಿಲ್ಲ. ಗ್ಯಾರಂಟಿ ವೆಚ್ಚಗಳು ಸೇರಿ ತಪ್ಪು ನಿರ್ಧಾರಗಳಿಂದ ಸಮಸ್ಯೆ ಎದುರಿಸುತ್ತಿದೆ. ಈ ಹುಳುಕು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಆರೋಪ ಹೊರಿಸುತ್ತಿದ್ದು, ಮೊದಲು ಸಮರ್ಥವಾಗಿ ತೆರಿಗೆ ಸಂಗ್ರಹ ಮಾಡಿ ತೋರಿಸಿರಿ ಎಂದು ಪಿ.ರಾಜೀವ್ ಸವಾಲೆಸೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net