ಬೈಕ್ ಟ್ಯಾಕ್ಸಿಗೆ ನಿಯಮ ರೂಪಿಸುವ ಬಗ್ಗೆ ನಿಲುವು ತಿಳಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

highcourt
Published on

ಬೆಂಗಳೂರು:  ಬೈಕ್ ಟ್ಯಾಕ್ಸಿಗಳ ಸೇವೆ ಕಾರ್ಯಾಚರಣೆ ಮುಂದುವರಿಸುವ ಸಂಬಂಧ ನಿಯಮ ರೂಪಿಸುವ ಬಗ್ಗೆ ಒಂದು ತಿಂಗಳಲ್ಲಿ ನಿಲುವು ತಿಳಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ರಾಜಧಾನಿ ಬೆಂಗಳೂರು ನಗರ ಸೇರಿ ರಾಜ್ಯದ ವಿವಿಧ ನಗರಗಳಲ್ಲಿ ಓಲಾ, ಉಬರ್ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಆಪರೇಟರ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನಾಯಮೂರ್ತಿ ವಿಭು ಬಖ್ರು ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಅಲ್ಲದೆ, ದೇಶದಲ್ಲಿ ಪ್ರತಿಯೊಬ್ಬರಿಗೆ ನ್ಯಾಯಯುತವಾಗಿ ವ್ಯವಹಾರ ನಡೆಸುವ ಸಂವಿಧಾನಬದ್ಧ ಹಕ್ಕಿದೆ. ಬೈಕ್-ಟ್ಯಾಕ್ಸಿ ಸೇವೆ ವಿಚಾರವಾಗಿ ಸರ್ಕಾರ ನಿಯಮ ರೂಪಿಸುವತ್ತ ಚಿತ್ತ ಹರಿಸಬಹುದು. ಈಗಾಗಲೇ 13 ರಾಜ್ಯಗಳು ನಿಯಮ ರೂಪಿಸಿವೆ. ಆದರೆ ನೀವು ನಿಷೇಧ ವಿಧಿಸಿದ್ದೀರಿ. ಈ ರೀತಿ ನಿಷೇಧ ಎಷ್ಟು ಸರಿ ಎಂಬುದನ್ನು ಪೀಠ ಪರಿಶೀಲಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಬೈಕ್-ಟ್ಯಾಕ್ಸಿ ಕಾರ್ಯಚರಣೆಯಿಂದ ಸಂಚಾರದಟ್ಟಣೆ ಉಂಟಾಗುವುದಿಲ್ಲ. ನಾಲ್ಕು ಚಕ್ರದ ವಾಹನ ಸಂಚರಿಸದ ಕಡೆ ದ್ವಿಚಕ್ರವಾಹನ ಚಲಾಯಿಸಬಹುದು. ಅಲ್ಲದೆ ಜೀವನೋಪಾಯಕ್ಕಾಗಿ ಅದೆಷ್ಟೋ ಮಂದಿ ಈ ಸೇವೆಯನ್ನೇ ಅವಲಂಬಿಸಿರುವುದನ್ನು ಪೀಠ ಗಮನಿಸಿದೆ. ಈ ಎಲ್ಲ ಅಂಶ ಪರಿಗಣಿಸಿ ಸರ್ಕಾರ ನೀತಿ ರೂಪಿಸುವುದಿದ್ದರೆ ಸಮಯ ನೀಡುತ್ತೇವೆ. ಈ ಬಗ್ಗೆ ನಿಮ್ಮ ನಿಲುವು ತಿಳಿಸಿ ಎಂದು ರಾಜ್ಯ ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿ ಹೈಕೋರ್ಟ್ ನುಡಿಯಿತು.

ನ್ಯಾಯಾಲಯದ ಸಲಹೆಗೆ ರಾಜ್ಯ ಸರ್ಕಾರದ ಪರ ಎಜಿ ಕೆ. ಶಶಿಕಿರಣ್ ಶೆಟ್ಟಿ ಪ್ರತಿಕ್ರಿಯಿಸಿ, 4 ವಾರದಲ್ಲಿ ಸರ್ಕಾರದ ನಿಲುವು ತಿಳಿಸುತ್ತೇವೆ ಎಂದರು. ಇದನ್ನು ಪರಿಗಣಿಸಿದ ಪೀಠ, ಸೆ.22ರೊಳಗೆ ಸರ್ಕಾರದ ನಿಲುವು ತಿಳಿಸಲು ಸೂಚಿಸಿ ವಿಚಾರಣೆ ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net