ಜಾತಿ ನಿಂದಕರ ವಿರುದ್ಧ ಕಾಯ್ದೆ ರೂಪಿಸಲಿ ರಾಜ್ಯ ಸರ್ಕಾರ

 ದಾವಣಗೆರೆಯಲ್ಲಿ ಸವಿತಾ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್. ಮುತ್ತುರಾಜ್ ಉದ್ಘಾಟಿಸಿದರು. ಭೀಮಸೇನ್, ಪಿ.ಬಿ. ವೆಂಕಟಾಚಲಪತಿ, ರಾಜಪ್ಪ, ವಿಜಯ ಭಾಸ್ಕರ್, ಬಾಲರಾಜ್ ಉಪ್ಪಲ, ಪಿ.ಜಿ.ನಾಗರಾಜ್ ಇದ್ದರು.  --
ದಾವಣಗೆರೆಯಲ್ಲಿ ಸವಿತಾ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್. ಮುತ್ತುರಾಜ್ ಉದ್ಘಾಟಿಸಿದರು. ಭೀಮಸೇನ್, ಪಿ.ಬಿ. ವೆಂಕಟಾಚಲಪತಿ, ರಾಜಪ್ಪ, ವಿಜಯ ಭಾಸ್ಕರ್, ಬಾಲರಾಜ್ ಉಪ್ಪಲ, ಪಿ.ಜಿ.ನಾಗರಾಜ್ ಇದ್ದರು. --
Published on

ಪ್ರಮುಖ ಮುಖ್ಯಾಂಶಗಳು

  • ಸವಿತಾ ನಿಗಮದ ಅಧ್ಯಕ್ಷ ಮುತ್ತುರಾಜ್ ಆಗ್ರಹ
  • ಶೀಘ್ರವೇ ಮುಖ್ಯಮಂತ್ರಿ ಬಳಿ ನಿಯೋಗ
  • ಸ್ವಾಭಿಮಾನ ಬೆಳೆಸಿಕೊಳ್ಳಬೇಕಿದೆ ಸಮಾಜ
ದಾವಣಗೆರೆ: ಸವಿತಾ ಸಮಾಜದ ಜಾತಿ ನಿಂದಿಸುವವರಿಗೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಮಾದರಿಯಲ್ಲೇ ಕೇಸ್ ದಾಖಲಿಸುವ ಕಾಯ್ದೆ ರೂಪಿಸಬೇಕು ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್. ಮುತ್ತುರಾಜ್ ಆಗ್ರಹಿಸಿದರು. 
ಸವಿತಾ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈಗಾಗಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ. ಪಾಟೀಲ್ ಜತೆ ಈ ಸಂಬಂಧ ಮಾತನಾಡಿದ್ದೇನೆ. ಮುಖಂಡರೊಂದಿಗೆ ಶೀಘ್ರವೇ ಮುಖ್ಯಮಂತ್ರಿ ಬಳಿ ನಿಯೋಗ ತೆರಳಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ಸಿ.ಟಿ. ರವಿ ಇತ್ತೀಚೆಗೆ ಸವಿತಾ ಸಮಾಜವನ್ನು ಅವಹೇಳನ ಮಾಡಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತುವಂತೆ ಅನೇಕರು ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಸಮಾಜದ ಯುವಕರು ಕೂಡ ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು. ಜಾತಿ ನಿಂದಿಸುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು. 
ಅನ್ಯ ಸಮಾಜಗಳು ತಮ್ಮ ಜನಸಂಖ್ಯೆಯನ್ನು 60 ಲಕ್ಷದಿಂದ 1 ಕೋಟಿ ರೂ.ವರೆಗೆ ನಿಖರವಾಗಿ ಗುರುತಿಸಿಕೊಂಡಿವೆ. ಆದರೆ ನಮ್ಮ ಸಮಾಜ 5 ಲಕ್ಷಕ್ಕೆ ಸೀಮಿತವಾಗಿದೆ. ಜಾತಿ ಹೇಳಿಕೊಳ್ಳದಿರುವ ನಮ್ಮಲ್ಲಿನ ಕೀಳಿರಿಮೆ ಹಾಗೂ ಶಿಕ್ಷಣದ ಕೊರತೆಯೇ ಇದಕ್ಕೆ ಕಾರಣ ಎಂದು ವಿಷಾದಿಸಿದರು. 
ಕ್ಷೌರಿಕ ಕಾಯಕಕ್ಕೆ ಹೊಡೆತ 
ಸವಿತಾ ಸಮಾಜ, ಶತಮಾನದಿಂದಲೂ ಕ್ಷೌರಿಕ ಕಾಯಕದ ಮೂಲಕ ಆರ್ಥಿಕತೆಯ ಭಾಗವಾಗಿದೆ. ಆದರೆ ಇತ್ತೀಚೆಗೆ ಬಾಂಗ್ಲಾ ವಲಸಿಗರು ಬಂದು ಸಲೂನ್‌ಗಳನ್ನು ತೆರೆದು ನಮ್ಮ ಕಸುಬು ಕಸಿದುಕೊಳ್ಳುತ್ತಿದ್ದಾರೆ. ಅನೇಕ ಕಂಪನಿಗಳೂ ಲಗ್ಗೆ ಇಟ್ಟಿದ್ದು ನಮ್ಮ ಕಾಯಕಕ್ಕೆ ಹೊಡೆತ ಬಿದ್ದಿದೆ ಎಂದು ವಿಷಾದ ವ್ಯಕ್ತಪಡಿಸಿದರು. 
ಸವಿತಾ ಸಮಾಜದವರು ಕ್ಷೌರಿಕ ವೃತ್ತಿ ಜತೆಗೆ ನಾದಸ್ವರ ನುಡಿಸುತ್ತ ಬಂದಿದ್ದಾರೆ. ನಾದಸ್ವರ ನುಡಿಸುವವರು ಸ್ವರ ಮತ್ತು ಸಾಹಿತ್ಯ ಎರಡರ ಮನನ ಮಾಡಿಕೊಳ್ಳಬೇಕು. ನಾಭಿಯಿಂದ ನುಡಿಸಿದಾಗ ಎಲ್ಲರನ್ನೂ ತಲುಪಲಿದೆ ಎಂದರಲ್ಲದೆ ಸವಿತಾ ಸಮಾಜ ಅನೇಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರೂ ಒಗ್ಗೂಡಿ ಕಾರ್ಯಕ್ರಮ ಮಾಡಬೇಕು ಎಂದು ಸಲಹೆ ನೀಡಿದರು.

ಸಮಾಜದ ಬಗ್ಗೆ ಹೆಮ್ಮೆ ಇರಲಿ

ನಮ್ಮ ವೃತ್ತಿ ಶ್ರೇಷ್ಠವಾದುದು. ಬಿಜ್ಜಳ ಮಹಾರಾಜ, ಬಿಹಾರದ ಮಾಜಿ ಸಿಎಂ, ಭಾರತರತ್ನ ಕರ್ಪೂರಿ ಠಾಕೂರ್ ನಮ್ಮ ಸಮಾಜದವರು. ಹೀಗಾಗಿ ನಾವು ಹೆಮ್ಮೆ ಪಡಬೇಕು. ಸಮಾಜದವರು ನ್ಯಾಯಾಧೀಶರು, ವಕೀಲರು, ಪತ್ರಕರ್ತರ ವಲಯದಲ್ಲೂ ಇದ್ದಾರೆ. ಆದರೂ ನಾವು ತಬ್ಬಲಿಯಂತೆ ಬದುಕುತ್ತಿದ್ದೇವೆ. ಇನ್ನಾದರೂ ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 
ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಭೀಮಸೇನ್ ಮಾತನಾಡಿ ಸವಿತಾ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನ ನೀಡಬೇಕು. ವಿದ್ಯಾವಂತರು ಸಮಾಜಸೇವೆಗೆ ತೊಡಗಿಕೊಳ್ಳಬೇಕು. ಪಾಲಕರು, ಹಿರಿಯರಿಗೆ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು. 
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಸಮಾಜದ ಸಾಧಕರನ್ನು ಗೌರವಿಸಲಾಯಿತು. ಉದ್ಯಮಿ ರಾಜಪ್ಪ, ರಾಯಚೂರು ಜಿಲ್ಲಾಧ್ಯಕ್ಷ ವಿಜಯ ಭಾಸ್ಕರ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಬಾಲರಾಜ್ ಉಪ್ಪಲ, ಜಿಲ್ಲಾ ಗೌರವಾಧ್ಯಕ್ಷ ಪಿ.ಜಿ.ನಾಗರಾಜ್ ಇದ್ದರು. 
ಸವಿತಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಬಿ. ವೆಂಕಟಾಚಲಪತಿ ಪ್ರಾಸ್ತಾವಿಕ ಮಾತನಾಡಿದರು. ನಾರಾಯಣ ರಾಂಪುರ ಸ್ವಾಗತಿಸಿದರೆ, ಜಯಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net