ರಾಜ್ಯ ಸರ್ಕಾರದಿಂದ 3ನೇ ಹಂತದ ಲಾಕ್​ಡೌನ್ ಮಾರ್ಗಸೂಚಿ ಬಿಡುಗಡೆ; ಕಂಟೇನ್​ಮೆಂಟ್​ ವಲಯ, ರೆಡ್​ ಝೋನ್​ಗಳಲ್ಲಿ ಏನಿರತ್ತೆ? ಏನಿರಲ್ಲ..?

Red Zone 2 May 20
Published on

ಬೆಂಗಳೂರು: ಲಾಕ್​ಡೌನ್​ ಮೇ 3ಕ್ಕೆ ಮುಕ್ತಾಯವಾಗುವುದಿಲ್ಲ, ಮೇ 17ರವರೆಗೂ ಮುಂದುವರಿಯಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದ್ದು, ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. ಇಡೀ ದೇಶವನ್ನು ಕರೊನಾ ರೆಡ್​ ಝೋನ್​, ಆರೆಂಜ್​ ಮತ್ತು ಗ್ರೀನ್​ ಝೋನ್​ಗಳನ್ನಾಗಿ ವಿಂಗಡಿಸಿ, ಆಯಾ ವಲಯಗಳಿಗೆ ತಕ್ಕಂತೆ ಕೆಲವು ಸಡಿಲಿಕೆಗಳನ್ನು ಮಾಡಿದೆ. ಆದರೆ ಈ ಮೂರು ವಲಯಗಳನ್ನು ಹೊರತುಪಡಿಸಿ, ಒಂದಷ್ಟು ನಿರ್ಬಂಧಗಳು ದೇಶಾದ್ಯಂತ ಹಾಗೇ ಮುಂದುವರಿಯಲಿವೆ.

ಇಂದು ರಾಜ್ಯ ಸರ್ಕಾರ ಕೂಡ ಮೇ 3ರ ನಂತರದ ಮೂರನೇ ಹಂತದ ಲಾಕ್​ಡೌನ್​ಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಂಟೇನ್​ಮೆಂಟ್​ ವಲಯಗಳಲ್ಲಿ ಏನಿರಲಿದೆ, ಹಾಟ್​ಸ್ಫಾಟ್​ಗಳಲ್ಲಿ ಏನೇನು ನಿಯಮಗಳು ಅನ್ವಯ ಆಗಲಿವೆ ಎಂಬುದನ್ನು ತಿಳಿಸಲಾಗಿದೆ.

ಕಂಟೇನ್​ಮೆಂಟ್​ ವಲಯಗಳು...
  1. ಆ ನಿರ್ಧಿಷ್ಟ ವಲಯದ ಸುತ್ತ ಬಿಗಿ ಭದ್ರತೆ ಇರುತ್ತದೆ.
  2. ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಗುರುತಿಸಲಾಗುತ್ತದೆ.
  3. ಕಂಟೇನ್​ಮೆಂಟ್​ ವಲಯಗಳಿಗೆ ಹೊರಗಿನವರು ಯಾರೂ ಬರುವಂತಿಲ್ಲ. ಅಗತ್ಯ ವಸ್ತುಗಳನ್ನು ಪೂರೈಸುವವರು, ವೈದ್ಯಕೀಯ ಸೇವೆ ನೀಡುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ.
  4. ವಲಯದ ಪರಿಧಿಯ ಒಳಗೆ ಮತ್ತು ಅದರ ಸುತ್ತಮುತ್ತ ಜನರು ಅನಗತ್ಯವಾಗಿ ಓಡಾಡುವಂತಿಲ್ಲ. ಅಂಥವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ರೆಡ್​ ಝೋನ್​ಗಳು (ಕರೊನಾ ಹಾಟ್​ಸ್ಫಾಟ್​ಗಳು)

ನಿರ್ಬಂಧಿತ ಚಟುವಟಿಕೆಗಳು ಹೀಗಿವೆ...:

  • ಸೈಕಲ್​ ರಿಕ್ಷಾ, ಆಟೋ ರಿಕ್ಷಾಗಳು, ಟ್ಯಾಕ್ಸಿ, ಕ್ಯಾಬ್​ಗಳ ಸಂಚಾರಕ್ಕೆ ಅವಕಾಶ ಇಲ್ಲ.
  • ಅಂತರ್​ ಜಿಲ್ಲಾ ಮತ್ತು ಅಂತರ ಜಿಲ್ಲಾ ಬಸ್​ ಸಂಚಾರ ಇರುವುದಿಲ್ಲ.
  • ಕೌರಿಕ ಅಂಗಡಿಗಳು, ಸ್ಪಾ, ಸಲೂನ್​ಗಳು ತೆರೆಯುವುದಿಲ್ಲ.

ಷರತ್ತುಗಳೊಂದಿಗೆ ಅನುಮತಿ ನೀಡಲಾದ ಚಟುವಟಿಕೆಗಳು...

ಅತ್ಯಗತ್ಯ ಕೆಲಸಗಳಿಗೆ ಅನುಮತಿ ಪಡೆದು ಸಾರ್ವಜನಿಕರು ಸಂಚಾರ ಮಾಡಬಹುದು. ವಾಹನಗಳನ್ನೂ ಓಡಿಸಬಹುದು. ಆದರೆ ನಿಯಮಗಳ ಪಾಲನೆ ಕಡ್ಡಾಯ.

ಕಾರು ಸೇರಿ ನಾಲ್ಕು ಚಕ್ರದ ವಾಹನಗಳಲ್ಲಿ ಚಾಲಕ ಸೇರಿ ಮೂರು ಜನರಿಗೆ ಅವಕಾಶ. ಬೈಕ್​ನಲ್ಲಿ ಒಬ್ಬರೇ ಪ್ರಯಾಣ ಮಾಡಬೇಕು.

ಆರ್ಥಿಕ ಚಟುವಟಿಕೆ ಪ್ರಾರಂಭ, ನಿಯಮ ಪಾಲನೆ ಕಡ್ಡಾಯ: ನಗರ ಪ್ರದೇಶಗಳಲ್ಲಿರುವ ಕೈಗಾರಿಕಾ ಉದ್ಯಮಗಳು, ವಿಶೇಷ ಆರ್ಥಿಕ ವಲಯಗಳು, ರಫ್ತು ಆಧಾರಿತ ಘಟಕಗಳು, ಇಂಡಸ್ಟ್ರಿಯಲ್​ ಎಸ್ಟೇಟ್​ಗಳು ಕಾರ್ಯ ಆರಂಭ ಮಾಡಬಹುದು. ಆದರೆ ಇಲ್ಲಿ ನಿಯಮಗಳ ಪಾಲನೆ ಕಡ್ಡಾಯ. ಕಾರ್ಮಿಕರು ಸೇರಿ ಹೊರಗಿನವರ ಪ್ರವೇಶದಲ್ಲಿ ನಿಯಂತ್ರಣ ಇರಬೇಕು.

ಹಾಗೇ, ನಗರ ಪ್ರದೇಶಗಳಲ್ಲಿರುವ ಅಗತ್ಯ ವಸ್ತುಗಳ ತಯಾರಿಕಾ ಕಾರ್ಖಾನೆಗಳು ಕೆಲಸ ಶುರು ಮಾಡಬಹುದು. ಔಷಧ, ವೈದ್ಯಕೀಯ ಸಾಧನಗಳು, ಅವುಗಳ ಕಚ್ಚಾ ವಸ್ತು ಪೂರೈಕೆ ಉದ್ಯಮಗಳು, ಹಾಗೇ ಉತ್ಪಾದನಾ ಘಟಕಗಳು, ಐಟಿ ಹಾರ್ಡ್​ವೇರ್​ ತಯಾರಿಕಾ ಘಟಕಗಳು, ಸೆಣಬು ಕಾರ್ಖಾನೆಗಳನ್ನೂ ತೆರೆಯಲು ಅವಕಾಶ ಇದೆ.
ಇಲ್ಲಿ ಕೆಲಸಗಾರರು ಒಂದೇ ಬಾರಿ ಎಲ್ಲರೂ ಬರುವಂತಿಲ್ಲ. ಸ್ವಲ್ಪ ಜನರ ಶಿಫ್ಟ್ ಮಾಡಬೇಕು. ಸಾಮಾಜಿಕ ಅಂತರ ಪಾಲನೆಯ ನಿಯಮ ಕಡ್ಡಾಯವಾಗಿ ಪಾಲನೆ ಆಗಬೇಕು.

ಕಟ್ಟಡ ನಿರ್ಮಾಣ ಕೆಲಸಗಳನ್ನೂ ಶುರು ಮಾಡಬಹುದು. ಆದರೆ ಹೊರಗಿನಿಂದ ಯಾವುದೇ ಕೆಲಸಗಾರರನ್ನು ಕರೆತರುವಂತಿಲ್ಲ. ಸ್ಥಳೀಯವಾಗಿಯೇ ಇರುವ ಕಾರ್ಮಿಕರನ್ನೇ ತೊಡಗಿಸಿಕೊಳ್ಳಬೇಕು. ಉಳಿದಂತೆ ಅಗತ್ಯವಿಲ್ಲದ ವಸ್ತುಗಳ ಅಂಗಡಿಗಳು ತೆರೆಯುವಂತಿಲ್ಲ. ಮಾಲ್​ಗಳು, ಮಾರ್ಕೆಟ್​ಗಳು, ಮಾರುಕಟ್ಟೆ ಸಂಕೀರ್ಣಗಳಿಗೆ ಅವಕಾಶವಿಲ್ಲ.

ನಗರ ಪ್ರದೇಶಗಳ ಕಾಲನಿಗಳಲ್ಲಿ ಇರುವ, ಅಗತ್ಯ ವಸ್ತುಗಳ, ಅನಿವಾರ್ಯವಲ್ಲ ವಸ್ತುಗಳ ಮತ್ತು ಇ-ಕಾಮರ್ಸ್​ಗೆ ಸಂಬಂಧಪಟ್ಟ ಚಿಕ್ಕಪುಟ್ಟ ಅಂಗಡಿಗಳು, ವಸತಿ ಸಂಕೀರ್ಣದ ಒಳಗೆ ಇರುವ ಶಾಪ್​ಗಳನ್ನು ತೆರೆಯಬಹುದು. ಆದರೆ ಇದೆಲ್ಲದರ ಬಗ್ಗೆ ಆಯಾ ಜಿಲ್ಲಾಡಳಿತ ಉಸ್ತುವಾರಿ ತೆಗೆದುಕೊಳ್ಳಬೇಕು.

ಇವುಗಳನ್ನು ಹೊರತು ಪಡಿಸಿ ಮೂರು ವಲಯಗಳಿಗೆ ಒಂದೇ ತೆರನಾಗಿ ಅನ್ವಯ ಆಗುವಂತೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಅವು ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಯಲ್ಲಿ ಇದ್ದಂತೆ ಇವೆ..ಆ ಕಟ್ಟುನಿಟ್ಟಿನ ನಿಯಮಗಳೇನು ಎಂಬುದನ್ನು ತಿಳಿಯಲು..ಇಲ್ಲಿ ಕ್ಲಿಕ್​ ಮಾಡಿ..: ದೇಶದಲ್ಲಿ ಹೀಗಿರಲಿದೆ 3ನೇ ಹಂತದ ಲಾಕ್​ಡೌನ್​; ಸಡಿಲಿಕೆಯ ನಡುವೆಯೂ ಈ ಎಲ್ಲ ಕಠಿಣ ನಿರ್ಬಂಧಗಳ ಮುಂದುವರಿಕೆ…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net