ನಾಗರಿಕರ ರಕ್ಷಣೆಗೆ ರಾಜ್ಯ ಸರ್ಕಾರ ಸನ್ನದ್ಧ|protect-citizens

c (8)
Published on

ಬೆಂಗಳೂರು: ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ(Strict action against those spreading fake news),ಫ್ಯಾಕ್ಟ್ ಚೆಕ್ ಚುರುಕು, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ...ಅಷ್ಟೇ ಅಲ್ಲ, ಯುದ್ಧದಂತಹ ಸಂದರ್ಭ ಬಳಸಿಕೊಂಡು ಅಕ್ರಮ ದಾಸ್ತಾನು ಮಾಡಿ ಅನಗತ್ಯವಾಗಿ ಸಾಮಾಗ್ರಿಗಳ ಬೆಲೆ ಹೆಚ್ಚು ಮಾಡುವ ಪ್ರಯತ್ನಗಳನ್ನು ತಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಭೀತಿ ವಾತಾವರಣದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ನಾಗರಿಕರ ರಕ್ಷಣಾ ಕಾರ್ಯ ಚಟುವಟಿಕೆಗಳ ಕುರಿತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠರ ಜತೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಾನೂನು ಸುವ್ಯವಸ್ಥೆಗಿಂತ ಯಾವುದೂ ದೊಡ್ಡದಲ್ಲ. ರಾಜ್ಯದ ಜನತೆಗೆ ಸೂಕ್ತ ರಕ್ಷಣೆ ನೀಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರಲ್ಲದೆ, ಕೋಮು ಸಾಮರಸ್ಯ ಕದಡುವ ಪ್ರಯತ್ನಗಳ ಮೇಲೆ ನಿಗಾ ಇರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೋಮು ಗೂಂಡಾಗಳ ಪಟ್ಟಿಯನ್ನು ಅಪ್‌ಡೇಟ್ ಮಾಡಬೇಕು. ಅವರ ಮೇಲೆ ನಿಗಾ ಇಡಬೇಕು ಎಂದು ಕಟ್ಟೆಚ್ಚರ ನೀಡಿದರು.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಸುಳ್ಳು ಸುದ್ದಿಗಳಿಗೆ ಕಡ್ಡಾಯವಾಗಿ ಕಡಿವಾಣ ಹಾಕುವಂತೆ ಹಾಗೂ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿರುವುದಾಗಿ ತಿಳಿಸಿದರು. ಕಾನೂನು ಸುವ್ಯವಸ್ಥೆಯೊಂದಿಗೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿರಬೇಕು. ಈ ಕುರಿತು ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು ಎಂದು ಹೇಳಿದ್ದೇವೆ. ಪ್ರಮುಖ ಸ್ಥಳಗಳಲ್ಲಿ ಮಾಕ್ ಡ್ರಿಲ್ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪ್ರಮುಖ ಸ್ಥಳಗಳಿಗೆ ಹೆಚ್ಚಿನ ಭದ್ರತೆ

ರಾಷ್ಟ್ರೀಯ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆಯನ್ನು ಕಾಪಾಡಬೇಕು. ಗುಪ್ತಚರ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು. ಸಾರ್ವಜನಿಕ ಸೇವೆ ಒದಗಿಸುವ ತಾಣಗಳಲ್ಲಿ ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ನಿರ್ದೇಶಿಸಲಾಗಿದೆ ಎಂದರು.

ಎಲ್ಲ ಜಿಲ್ಲೆಗಳಲ್ಲಿ ಸಹಾಯವಾಣಿ

ಅಗ್ನಿಶಾಮಕ ದಳದ ಕೇಂದ್ರಗಳು ದಿನದ 24ಗಂಟೆ ಸನ್ನದ್ಧ ಸ್ಥಿತಿಯಲ್ಲಿರಬೇಕು. ಎಲ್ಲ ಜಿಲ್ಲೆಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆದು, ಸಹಾಯವಾಣಿ ಆರಂಭಿಸಬೇಕು. ಪೌರರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿ, ಅವರಿಗೆ ಸೂಕ್ತ ತರಬೇತಿ ಒದಗಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ಪೌರ ರಕ್ಷಣಾ ವ್ಯವಸ್ಥೆಗೆ ಸ್ವಯಂಸೇವಕರನ್ನು ನೇಮಕ ಮಾಡುವ ಕಾರ್ಯ ಆರಂಭಿಸಬೇಕು. ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಲು ವ್ಯವಸ್ಥೆ ಕಲ್ಪಿಸಬೇಕು. ಕರಾವಳಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಬೇಕು. ಎಲ್ಲ ಪ್ರಮುಖ ಸ್ಥಳಗಳಲ್ಲಿ ನಿರಂತರ ಗಸ್ತು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದರು.

ಅಧಿಕಾರಿಗಳಿಗೆ ಸಿಎಂ ಸೂಚನೆಗಳೇನು..?

-ಪ್ರಮುಖ ಸ್ಥಳಗಳಲ್ಲಿ ಮಾಕ್ ಡ್ರಿಲ್ ಮಾಡಬೇಕು.

-ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ದೇಶದ, ರಾಜ್ಯದ ಸಹಬಾಳ್ವೆಗೆ ಧಕ್ಕೆ ತರುವ, ಕೋಮುಭಾವನೆ ಕೆರಳಿಸಿ ದೇಶದ ಭದ್ರತೆಗೆ ಅಪಾಯ ತರಲು ಷಡ್ಯಂತ್ರ ನಡೆಸುತ್ತಿರುವವರ ಪಟ್ಟಿ ಸಿದ್ದಪಡಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು.

-ಕೋಮು ಸಾಮರಸ್ಯ ಕದಡುವ ಪ್ರಯತ್ನಗಳ ಮೇಲೆ ನಿಗಾ ಇರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

-ಕೋಮು ಗೂಂಡಾಗಳ ಪಟ್ಟಿಯನ್ನು ಅಪ್‌ಡೇಟ್ ಮಾಡಬೇಕು, ಅವರ ಮೇಲೆ ನಿಗಾ ಇಡಬೇಕು.

-ಎಲ್ಲಾ ಕಮಿಷನರೇಟ್‌ಗಳಲ್ಲಿ ಅಲರ್ಟ್ ಆಗಿರಬೇಕು.

-ಪ್ರಮುಖ ಸ್ಥಾವರಗಳಲ್ಲಿ ಭದ್ರತೆಯನ್ನು ಹೆಚ್ಚಿಸಬೇಕು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು.

-ಆಹಾರ ಭದ್ರತೆಯನ್ನು ಖಾತ್ರಿಪಡಿಸಬೇಕು. ಅಕ್ರಮ ದಾಸ್ತಾನು ಮೂಲಕ ಬೆಲೆ ಏರಿಕೆ ಮಾಡುವ ಪ್ರಯತ್ನಗಳನ್ನು ತಪ್ಪಿಸಬೇಕು.

-ಸುರಕ್ಷತೆ ಕುರಿತಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಸಹ ಕಟ್ಟುನಿಟ್ಟಿನಿಂದ ಪಾಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net