

ಬೆಂಗಳೂರು: ಜಾತಿಗಳ ಮಧ್ಯೆ ಸಮಸ್ಯೆ, ಹಿಂದುಳಿದ ವರ್ಗಗಳಲ್ಲಿ ಗೊಂದಲ ಹುಟ್ಟಿ ಹಾಕಿದ್ದು ಸಾಕು. ಹೊಸದಾಗಿ ಜಾತಿ ಜನಗಣತಿ ನಿರ್ಧಾರದಿಂದ ಹಿಂದೆ ಸರಿದು, ಕೇಂದ್ರ ಸರ್ಕಾರದ ಉದ್ದೇಶಿತ ಜನಗಣತಿ ಸಮೀಕ್ಷೆಗೆ ಸಹಕರಿಸಬೇಕು ಎಂದು ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯ ಆಗ್ರಹಿಸಿದ್ದಾರೆ.
ಎಚ್.ಕಾಂತರಾಜು ವರದಿಯಲ್ಲಿನ ಅಂಕಿ-ಅಂಶಗಳು ದಶಕದಷ್ಟು ಹಳೆಯದು. ವೈಜ್ಞಾನಿಕವಾಗಿಲ್ಲ ಎಂದು ಹೇಳಿದರೂ ರಾಜ್ಯ ಸರ್ಕಾರ ಎಲ್ಲವೂ ಸರಿಯಾಗಿದೆ ಎಂದು ವಾದಿಸಿತ್ತು. ಇದೀಗ 10 ವರ್ಷಗಳ ಹಿಂದಿನ ದತ್ತಾಂಶ ಕಾನೂನು ಪ್ರಕಾರ ಮಾನ್ಯವಲ್ಲ ಎನ್ನುತ್ತಿದೆ.
ದಶಕದ ಹಿಂದೆ ಇದಕ್ಕಾಗಿ ವೆಚ್ಚ ಮಾಡಿದ ಜನರ ತೆರಿಗೆ ಹಣ 167 ಕೋಟಿ ರೂ. ವ್ಯರ್ಥವಾಗಿದೆ. ಈಗ ಮತ್ತೊಂದು ಸಮೀಕ್ಷೆಗೆ ಮುಂದಾಗಿದೆ. ಇದರಿಂದಲೂ ಹೊರ ಅಂಕಿ-ಅಂಶಗಳ ಬಗ್ಗೆ ಬೇರೆ ಕೆಲವು ಜಾತಿಗಳು ಕಡಿಮೆ ಎಂದು ವಿರೋಧಿಸಿದರೆ ಮತ್ತೆ ಗೊಂದಲ, ಅನಗತ್ಯ ವೆಚ್ಚಕ್ಕೆ ಆವಕಾಶ ಮಾಡಿಕೊಟ್ಟಂತಾಗುತ್ತದೆ.
ಜನ ಸಮುದಾಯಗಳನ್ನು ಹೀಗೆ ದಾರಿ ತಪ್ಪಿಸುವ ಬದಲು, ಸಂವಿಧಾನಾತ್ಮಕ ಅಧಿಕಾರವುಳ್ಳ ಕೇಂದ್ರ ಸರ್ಕಾರಕ್ಕೆ ಆ ಜವಾಬ್ದಾರಿ ಬಿಟ್ಟುಕೊಡುವುದು ಸೂಕ್ತ. ಹೊಸ ಸಮೀಕ್ಷೆ ಸಾಹಸಕ್ಕೆ ರಾಜ್ಯ ಸರ್ಕಾರ ಕೈ ಹಾಕದೆ ಕೇಂದ್ರ ಸರ್ಕಾರದ ಕ್ರಮಕ್ಕೆ ಸಹರಿಸಬೇಕು ಎಂದು ಲಹರ್‌ಸಿಂಗ್ ಸಿರೋಯ ಪುನರುಚ್ಚರಿಸಿದ್ದಾರೆ.