

ಬೆಂಗಳೂರು: ಕೇಂದ್ರ ರಸ್ತೆ ನಿಧಿಯಲ್ಲಿ (ಸಿಆರ್ಎಫ್) ರಾಜ್ಯಕ್ಕೆ ಸಿಗುವ 500 ಕೋಟಿ ರೂ. ಅನುದಾನಕ್ಕೆ ಪ್ರತಿಯಾಗಿ ಹಿಂದಿನ ಸರ್ಕಾರಗಳು 5,700 ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ನೀಡಿದ್ದು, ಈಗ ಸರ್ಕಾರಕ್ಕೆ ಇಕ್ಕಟ್ಟಿನ ಸ್ಥಿತಿ ಎದುರಾಗಿದೆ. ಈಗಾಗಲೇ ಕೆಲಸ ಆರಂಭವಾಗಿರುವ 7682 ಕಿ.ಮೀ.ಗಳ 849 ರಸ್ತೆ ಕಾಮಗಾರಿಗಳಿಗೆ ಹಣ ಹೊಂದಿಸುವುದು ತಲೆನೋವಾಗಿದೆ.
ಪೆಟ್ರೋಲ್, ಡೀಸೆಲ್ ಮಾರಾಟದಿಂದ ಸಂಗ್ರಹವಾಗುವ ಸೆಸ್ನಲ್ಲಿ ರಾಜ್ಯಗಳಿಗೆ ಸಿಆರ್ಎಫ್ ನಿಧಿ ಸಿಗುತ್ತದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹೆಚ್ಚುವರಿ ಅನುದಾನ ಕೇಳುವುದಿಲ್ಲವೆಂದು ಹಿಂದಿನ ಸರ್ಕಾರಗಳು ಮುಚ್ಚಳಿಕೆ ಬರೆದುಕೊಟ್ಟಿರುವುದು ಗಮನಕ್ಕೆ ಬಂತು. 5,700 ಕೋಟಿ ರೂ.ಗಳ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ ಈ ಮುಚ್ಚಳಿಕೆ ಬರೆದು ಕೊಡಲಾಗಿದೆ. ಇದೀಗ ಆರಂಭವಾಗಿರುವ ಕಾಮಗಾರಿಗಳನ್ನು ನಿಲ್ಲಿಸದೇ ಹಣ ಹೊಂದಾಣಿಕೆಗೆ ಪರದಾಡುವ ಸ್ಥಿತಿ ನಿರ್ವಣವಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಐದು ಟೋಲ್ ರಸ್ತೆ: ಕೆಶಿಪ್-3ರಲ್ಲಿ 5,334 ಕೋಟಿ ರೂ. ವೆಚ್ಚದಲ್ಲಿ ಐದು ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇವು ಟೋಲ್ ರಸ್ತೆಗಳಾಗಿರುತ್ತವೆ. 10 ವರ್ಷಗಳ ನಿರ್ವಹಣೆಯ ಷರತ್ತಿನಲ್ಲಿ 418 ಕಿಮೀ ವ್ಯಾಪ್ತಿಯ ಈ ರಸ್ತೆಗಳನ್ನು ಖಾಸಗಿಯವರಿಗೆ ನೀಡಲಾಗುತ್ತದೆ. ಬೆಂಗಳೂರು-ಮಾಗಡಿ- ಕುಣಿಗಲ್, ಹೊನ್ನಾಳಿ-ಗದಗ, ಚಿಂತಾಮಣಿ-ಆಂಧ್ರಪ್ರದೇಶ ಗಡಿ, ಕುಣಿಗಲ್-ಕೊಳ್ಳೇಗಾಲ, ಕೊಳ್ಳೇಗಾಲ-ಹನೂರು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕಾರಜೋಳ ಹೇಳಿದರು.
ಬೆಂಗಳೂರು ಸುತ್ತ ರಸ್ತೆಗಳ ಅಭಿವೃದ್ಧಿ: ಬೆಂಗಳೂರಿನ ಸುತ್ತ ಸಂಚಾರ ದಟ್ಟಣೆ ಕಡಿಮೆ ಮಾಡಲು ರಸ್ತೆಗಳನ್ನು ಹಾಗೂ ಸೇತುವೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. 155 ಕಿ.ಮೀಯ 4 ರಸ್ತೆಗಳನ್ನು ಹತ್ತು ಪ್ಯಾಕೇಜ್ಗಳಲ್ಲಿ 2095 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ. ಹೊಸಕೋಟೆ-ಬೂದಿಗೆರೆ ಕ್ರಾಸ್, ನೆಲಮಂಗಲ-ಮಧುರೆ, ಮಧುರೆ-ದೇವನಹಳ್ಳಿ ರಸ್ತೆ, ಬಸವನಹಳ್ಳಿ ಬಳಿಯಲ್ಲಿ ರೈಲ್ವೆ ಕೆಳಸೇತುವೆ, ರಾಜನಕುಂಟೆಯಲ್ಲಿ ರೈಲ್ವೆ ಮೇಲ್ಸೇತುವೆ, ಬಿಡದಿ-ಜಿಗಣಿ ರಸ್ತೆ, ಬನ್ನೇರುಘಟ್ಟ-ಆನೇಕಲ್ ರಸ್ತೆ, ಆನೇಕಲ್-ಹೊಸಕೋಟೆ, ವರ್ತರು ಕೋಟಿ ಜಂಕ್ಷನ್ನಲ್ಲಿ ಗ್ರೇಡ್ ಸಪರೇಟರ್, ವರ್ತರು ಗ್ರಾಮದಲ್ಲಿ ಎಲಿವೇಟಡ್ ಕಾರಿಡಾರ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಗುಂಡಿ ಮುಚ್ಚದಿದ್ದರೆ ಇಂಜಿನಿಯರ್ ಹೊಣೆ
ರಾಜ್ಯದ ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಜನವರಿ ಅಂತ್ಯದೊಳಗೆ ಮುಚ್ಚದಿದ್ದರೆ ಆಯಾ ಇಂಜಿನಿಯರ್ಗಳನ್ನು ಹೊಣೆ ಮಾಡಲಾಗುತ್ತದೆ. ಅವರ ಸೇವಾ ಪುಸ್ತಕದಲ್ಲಿಯೂ ಈ ನಿರ್ಲಕ್ಷ್ಯವನ್ನು ದಾಖಲಿಸಲಾಗುತ್ತದೆ ಎಂದು ಸಚಿವ ಕಾರಜೋಳ ಹೇಳಿದರು. ಒಟ್ಟು 43,388 ಕಿ.ಮೀ ರಸ್ತೆಗಳಲ್ಲಿ ಗುಂಡಿಗಳಿದ್ದು, ಈ ಪೈಕಿ 39,041 ಕಿ.ಮೀಗಳಲ್ಲಿನ ಗುಂಡಿಗಳನ್ನು ಮುಚ್ಚಲಾಗಿದೆ. 193 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇಲಾಖೆಗೆ 9,549 ಕೋಟಿ ರೂ.ಗಳ ಅನುದಾನ ಇದ್ದು, ಡಿಸೆಂಬರ್ ಅಂತ್ಯದ ತನಕ 3,649 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.