

ಬೆಂಗಳೂರು: ನಾಡಧ್ವಜಕ್ಕೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಐದು ವರ್ಷಗಳು ಕಳೆದಿದ್ದು, ಇನ್ನೂವರೆಗೆ ಒಪ್ಪಿಗೆ ನೀಡಿಲ್ಲ. ಸದ್ಯಕ್ಕೆ ಕೆಂಪು, ಹಳದಿ ಬಣ್ಣದ ಬಾವುಟ ಬಳಸುತ್ತಿದ್ದರೂ ಅಧಿಕೃತ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ನಾಡಿನ ಅಸ್ಮಿತೆಯ ಸಂಕೇತವಾಗಿ ನಾಡ ಬಾವುಟ ಬೇಕು ಎಂಬ ಜನರ ಅಪೇಕ್ಷೆಗೆ ಸರ್ಕಾರದ ಒತ್ತಾಸೆಯಿದೆ. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಪತ್ರ ಬರೆದು ನೆನಪಿಸಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನಾಡದೇವಿ ಭುವನೇಶ್ವರಿ ಪ್ರತಿಮೆ ಹಾಗೂ ಮೈಸೂರಿನಲ್ಲಿ ದೇವರಾಜ ಅರಸು ಪ್ರತಿಮೆ ಸುವರ್ಣ ಸಂಭ್ರಮ ಸಮಾರೋಪದ ದಿನ ನೆರವೇರಲಿದೆ. ವಿಧಾನಸೌಧ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ಮುಖ್ಯಮಂತ್ರಿ ಒಲವು ತೋರಿದ್ದು, ಅಂತಿಮ ನಿರ್ಧಾರವಾಗಿಲ್ಲ ಎಂದು ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದರು.
ಸುವರ್ಣ ಸಂಭ್ರಮ ನಿಮಿತ್ತದ ಕಾರ್ಯಚಟುವಟಿಕೆಗಳಿಗೆ 20 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ. ಅಗತ್ಯಬಿದ್ದರೆ ಇನ್ನಷ್ಟು ನೆರವಿನ ಭರವಸೆಯನ್ನೂ ನೀಡಿದ್ದಾರೆ.
ಪ್ರಾಧಿಕಾರಗಳು, ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರ ಮತ್ತು ಸದಸ್ಯರ ನೇಮಕ ಪೂರ್ವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ನವೆಂಬರ್ ಅಂತ್ಯದೊಳಗೆ ನೇಮಕವಾಗಲಿದೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.
ನಾಡಿನ ಭಾಷೆ ಉಳಿಸಿ ಬೆಳೆಸುವುದಕ್ಕೆ ಸರ್ಕಾರದ ಜತೆಗೆ ನಾಡಿನ ಜನರು ಕೈಜೋಡಿಸಬೇಕು. ಬೇರೆ ಭಾಷೆ ಬಳಕೆ ವಿಷಯದಲ್ಲಿ ಕನ್ನಡಿಗರ ಔದಾರ್ಯತೆ ಸ್ವಲ್ಪ ಹೆಚ್ಚೇ ಇದೆ. ಅನ್ಯ ರಾಜ್ಯದವರಿಗೆ ಕನ್ನಡ ಕಲಿಸಲು ಪ್ರೋತ್ಸಾಹಿಸುವ ಜತೆಗೆ ನಮ್ಮ ಭಾಷೆಯಲ್ಲೇ ಅವರದೊಂದಿಗೆ ವ್ಯವಹರಿಸಬೇಕು ಎಂಬ ಸಲಹೆ ಹೇಳಿದರು.
ಗಡಿನಾಡ ಶಾಲೆಗಳು ಅನುದಾನ, ಪಠ್ಯಪುಸ್ತಕ ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆದ್ಯತೆ ಮೇಲೆ ಬಗೆಹರಿಸಲಾಗುವುದು. ಗಡಿನಾಡ ಕನ್ನಡಿಗರ ಕುಂದು-ಕೊರತೆಗಳು ಸರ್ಕಾರದ ಗಮನಕ್ಕಿದೆ. ಈ ನಿಟ್ಟಿನಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವೆಂದು ಶಿವರಾಜ್ ತಂಗಡಗಿ ಭರವಸೆ ನೀಡಿದರು.