

ಯಳಂದೂರು: ಮಲೆಮಹದೇಶ್ವರ ಬೆಟ್ಟದಲ್ಲಿ ಇಷ್ಟು ದಿನ ನಾನಾ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ರಾಜ್ಯ ಸಚಿವ ಸಂಪುಟ ಸಭೆ ಏ.24ಕ್ಕೆ ನಡೆಯಲಿದ್ದು ಇದಕ್ಕಾಗಿ ಈಗಾಗಲೇ ಎಲ್ಲ ಸಿದ್ಧೆತೆಗಳು ನಡೆದಿದ್ದು ನನ್ನ ಕ್ಷೇತ್ರ ವ್ಯಾಪ್ತಿಯ ಅನೇಕ ಅಭಿವೃದ್ಧಿಯ ಕುರಿತು ಚರ್ಚಿಸಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಮಾಹಿತಿ ನೀಡಿದರು.
ಪಟ್ಟಣ ಪಂಚಾಯಿತಿಯ ಮುಖ್ಯಮಂತ್ರಿ ನಗರೋತ್ಥಾನ 4ನೇ ಹಂತದ 113.30 ಲಕ್ಷ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, ನಮ್ಮ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಪಟ್ಟಣದ 24*7 ನಿರಂತರ ಕುಡಿಯುವ ನೀರಿಗೆ 20 ಕೋಟಿ ರೂ. ಒಳಚರಂಡಿಗೆ 46 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ಸಲ್ಲಿಸಲಾಗುವುದು. ಅಲ್ಲದೆ ಇಲ್ಲಿ ಖಾಲಿ ನಿವೇಶನಗಳ ಸಮಸ್ಯೆ ಇದ್ದು ಹೊಸ ನಿವೇಶನ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಈ ಹಿಂದೆ ಬಂದಿದ್ದ 100 ನಿವೇಶನಗಳ ವಾಪಸ್ಸಾಗಿತ್ತು, ಅಲ್ಲಿಂದ ಇಲ್ಲಿವರೆಗೆ ಇನ್ನೂ ನಿವೇಶನಗಳು ಬಂದಿಲ್ಲ. ಇದನ್ನು ತರಲು ಶ್ರಮಿಸಲಾಗುವುದು ಎಂದರು.
ಪೌರಾಡಳಿತ ಇಲಾಖೆಯಲ್ಲಿ ಪೌರ ಕಾರ್ಮಿಕರ ಹುದ್ದೆಗಳು ಖಾಲಿ ಇದ್ದು ಇದನ್ನು ಭರ್ತಿ ಮಾಡುವಂತೆ ನಾನು ಸದನದಲ್ಲಿ ಪ್ರಶ್ನಿಸಿದ್ದೆ. ಈಗ ರಾಜ್ಯಾದ್ಯಂತ 1100 ಹುದ್ದೆಗಳು ಖಾಲಿ ಇದ್ದು ಇದನ್ನು ಭರ್ತಿ ಮಾಡಲು ಕ್ರಮ ವಹಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಿದಾಗ ಬೈಪಾಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆಗ ಊರೊಳಗಿನ ರಸ್ತೆಗಳನ್ನು ಹಾಗೆ ಬಿಡಲಾಗಿದೆ. ಇದು ಕೆಟ್ಟು ಹೋಗಿದ್ದು ಇದರ ದುರಸ್ತಿಗೆ ಸಂಸದ ಸುನೀಲ್ ಬೋಸ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಈ ರಸ್ತೆ ಅಭಿವೃದ್ಧಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಚಾಮರಾಜನಗರ ಗಡಿ ಭಾಗದಿಂದ ಇಂತಹ ಎಲ್ಲ ರಸ್ತೆಗಳ ಅಭಿವೃದ್ಧಿಗೂ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದರು.
ನಗರೋತ್ಥಾನ ಯೋಜನೆಯಡಿಯಲ್ಲಿ ಯಳಂದೂರು ಪಪಂಗೆ ಸೇರಿದ ನೀರು ಶುದ್ಧೀಕರಣ ಘಟಕದ ಸುತ್ತುಗೋಡೆ ನಿರ್ಮಾಣ ಹಾಗೂ ಇತರ ಅಭಿವೃದ್ಧಿಗೆ 45 ಲಕ್ಷ ರೂ. 1ನೇ ವಾರ್ಡಿನ ಸೊಪ್ಪಿನಕೇರಿ ಬೀದಿಯ ಶೌಚಗೃಹ ನಿರ್ಮಾಣ, 7ನೇ ವಾರ್ಡಿನ ಪರಿಶಿಷ್ಟ ಪಂಗಡದ 2 ಸಮುದಾಯ ಭವನಗಳ ಮುಂದುವರಿದ ಕಾಮಗಾರಿಗೆ 14.18 ಲಕ್ಷ ರೂ., ಮೂರು ಪಾರ್ಕ್‌ಗಳ ಅಭಿವೃದ್ಧಿಗೆ 25 ಲಕ್ಷ ರೂ., ಪಟ್ಟಣ ವ್ಯಾಪ್ತಿಯ ಎಲ್ಲ ಸರ್ಕಾರಿ ಕಚೇರಿಗಳ ಸರ್ಕಾರಿ ಶಾಲೆಗಳಲ್ಲಿ ಅಂಗವಿಕಲರಸ್ನೇಹಿ ರ‌್ಯಾಂಪ್ ನಿರ್ಮಾಣ, ರೈಲಿಂಗ್ಸ್‌ಗೆ 10.63 ಲಕ್ಷ ರೂ. 11ನೇ ವಾರ್ಡಿನ ಅಂಗನವಾಡಿ ಹಾಗೂ ಸಾಮೂಹಿಕ ಶೌಚಗೃಹ ನಿರ್ಮಾಣಕ್ಕೆ 18.49 ಲಕ್ಷ ರೂ., ಒಟ್ಟು 113.30 ಲಕ್ಷ ರೂ.ಗಳ ಕಾಮಗಾರಿಗಳು ನಡೆಯಲಿದ್ದು ಇದನ್ನು ಆದಷ್ಟು ಬೇಗ ಉತ್ತಮ ಗುಣಮಟ್ಟದೊಂದಿಗೆ ನಿರ್ಮಿಸಬೇಕು ಎಂದು ಸೂಚನೆ ನೀಡಿದರು.
ಪಪಂ ಸದಸ್ಯ ವೈ.ಜಿ.ರಂಗನಾಥ ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್ ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್ ಮಾತನಾಡಿದರು. ಪಪಂ ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು, ಸದಸ್ಯರಾದ ಮಹೇಶ್, ರವಿ, ಸುಶೀಲಾ ಪ್ರಕಾಶ್. ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ನಾಗೇಂದ್ರ, ಮುಖಂಡರಾದ ಮಲ್ಲು, ನಿಂಗರಾಜು, ಪ್ರಕಾಶ್, ಜಮೀರ್ ಸೇರಿದಂತೆ ಅನೇಕರು ಇದ್ದರು.