

ಬೆಂಗಳೂರು: ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಪ್ರತಿವರ್ಷ 10,000 ರೂಪಾಯಿ ವಾರ್ಷಿಕ ಹಣಕಾಸು ನೆರವು ನೀಡುವುದರ ಜತೆಗೆ ಎಲ್ಲ ರೈತರು ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ನಲ್ಲಿ ಘೋಷಿಸಿದ್ದಾರೆ.
ರೈತರು ಅಧಿಕ ಬಡ್ಡಿದರ ಅನೌಪಚಾರಿಕ ಸಾಲದ ಸುಳಿಯಲ್ಲಿ ಸಿಲುಕುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಂಡಿದ್ದಾಗಿ ಸಿಎಂ ತಿಳಿಸಿದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೇಂದ್ರ ಸರ್ಕಾರ ನೀಡುವ 6000 ರೂ.ಜತೆ ನಮ್ಮ ಸರ್ಕಾರ 4000 ರೂ.ಹೆಚ್ಚುವರಿ ನೆರವು ನೀಡಲಿದೆ. ಒಟ್ಟು ವಾರ್ಷಿಕವಾಗಿ 10,000 ರೂ.ನೆರವು ನೀಡಲಾಗುವುದು.
ಈವರೆಗೆ ಸುಮಾರು 41 ಲಕ್ಷ ಬ್ಯಾಂಕ್ ಖಾತೆಗಳಿಗೆ 825 ಕೋಟಿ ರೂಪಾಯಿಯನ್ನು ವರ್ಗಾಯಿಸಲಾಗಿದೆ. ಈ ಯೋಜನೆಯನ್ನು ಮುಂದುವರಿಸಲು ಪ್ರಸಕ್ತ ಸಾಲಿನ ಬಜೆಟ್ನಲ್ಲಿ 2600 ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ತಿಳಿಸಿದರು.