ರೈತ ಶಕ್ತಿ, ಕೃಷಿಗೆ ಬೊಮ್ಮಾಯಿ ಬುತ್ತಿ!: ರಾಜ್ಯದಲ್ಲಿ ಮೊದಲ ಬಾರಿ ಡೀಸಲ್​ಗೆ ಸಹಾಯಧನ...

Page 6
Published on

ಬೆಂಗಳೂರು: ವ್ಯವಸಾಯ ಮಾಡಲು ಕಾರ್ವಿುಕರ ಕೊರತೆ ಕಾಡುತ್ತಿರುವ ದಿನಮಾನಗಳಲ್ಲಿ ಉತ್ಪಾದಕತೆ ಹೆಚ್ಚಿಸುವಲ್ಲಿ ಕೃಷಿ ಯಾಂತ್ರೀಕರಣ ಪಾತ್ರ ಬಹುಮುಖ್ಯ. ಈ ನಿಟ್ಟಿನಲ್ಲಿ ಯಂತ್ರೋಪಕರಣ ಬಳಕೆಗೆ ಪೋ›ತ್ಸಾಹ ಹಾಗೂ ಇಂಧನ ವೆಚ್ಚದ ಭಾರ ಕಡಿಮೆ ಮಾಡಲು ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಪ್ರತಿ ಎಕರೆಗೆ 250 ರೂ.ಗಳಂತೆ ಗರಿಷ್ಠ ಐದು ಎಕರೆಗೆ ಡಿ.ಬಿ.ಟಿ. ಮೂಲಕ ಡೀಸಲ್​ಗೆ ಸಹಾಯಧನ ನೀಡಲು ‘ರೈತ ಶಕ್ತಿ’ ಎಂಬ ಹೊಸ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಆಯವ್ಯಯದಲ್ಲಿ ಘೋಷಿಸಿದ್ದು, ಇದಕ್ಕಾಗಿ 500 ಕೋಟಿ ರೂ. ಒದಗಿಸಿದ್ದಾರೆ. ಜತೆಗೆ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣ ಕೈಗೆಟುಕುವಂತೆ ಮಾಡಲು ಹಾಗೂ ಕೃಷಿ ಉತ್ಪಾದಕತೆ ಹೆಚ್ಚಿಸಲು ಈಗಾಗಲೆ ಸ್ಥಾಪಿಸಿರುವ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ರಾಜ್ಯದ ಎಲ್ಲ ಹೋಬಳಿಗಳಿಗೂ ವಿಸ್ತರಿಸುವುದಾಗಿ ತಿಳಿಸಿದ್ದಾರೆ. ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಅನುಗುಣವಾಗಿ ರೈತರ ಆದಾಯವೂ ಹೆಚ್ಚಳವಾಗಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಕನಸಿಗೆ ಪೂರಕವಾಗಿ ರೈತರ ಆದಾಯ ದ್ವಿಗುಣಗೊಳಿಸುವ ಕನಸು ಕಂಡಿರುವ ಬೊಮ್ಮಾಯಿ, ಆ ನಿಟ್ಟಿನಲ್ಲಿ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದ್ದು, ಕೃಷಿ, ತೋಟಗಾರಿಕೆ ಮತ್ತು ಕೃಷಿ ಪೂರಕ ಚಟುವಟಿಕೆಗಳಿಗೆ ಒಟ್ಟಾರೆ ಬಜೆಟ್​ನ ಶೇ.3 ಪ್ರತಿಶತ ಅಂದರೆ 8457 ಕೋಟಿ ರೂ. ಮೀಸಲಿಟ್ಟಿದ್ದಾರೆ. ಕಳೆದ ಸಾಲಿನಲ್ಲಿ 7,297 ಕೋಟಿ ರೂ. ಇದ್ದ ಅನುದಾನವನ್ನು ಈ ವರ್ಷ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಾಗಿದ್ದು, ಕೃಷಿ ಕ್ಷೇತ್ರದ ಸುಧಾರಣೆ ಹಾಗೂ ಕೃಷಿಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಕಿಸಾನ್ ಸಮ್ಮಾನ್ ಮುಂದುವರಿಕೆ: ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವಾರ್ಷಿಕವಾಗಿ ಕೇಂದ್ರ ಸರ್ಕಾರ ನೀಡುವ 6,000 ರೂ. ನೆರವಿನೊಂದಿಗೆ ರಾಜ್ಯ ಸರ್ಕಾರ 4 ಸಾವಿರ ರೂ. ಹೆಚ್ಚುವರಿಯಾಗಿ ನೀಡುತ್ತಿದ್ದು, ಕಳೆದ ಸಾಲಿನಲ್ಲಿ 50 ಲಕ್ಷಕ್ಕೂ ಹೆಚ್ಚಿನ ರೈತರಿಗೆ 1,978 ಕೋಟಿ ರೂ. ಅನುದಾನವನ್ನು ನೇರ ನಗದು ಮೂಲಕ ವರ್ಗಾಯಿಸಲಾಗಿದೆ. ಈ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಪ್ರಶಸ್ತಿ-ಪ್ರೋತ್ಸಾಹ: ಕೃಷಿಯಲ್ಲಿ ರೈತ ಮಹಿಳೆಯರನ್ನು ಪೋ›ತ್ಸಾಹಿಸುವ ಸಲುವಾಗಿ ಹಾಗೂ ಇತರ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕವಾದ ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಲಾಗುವುದು.

ನೈಸರ್ಗಿಕ ಕೃಷಿಗೆ ಪ್ರೋತ್ಸಾಹ: ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ, ಸಾವಯವ ಕೃಷಿ ಟ್ರೆಂಡ್ ಆಗಿದ್ದು, ನೈಸರ್ಗಿಕ ಕೃಷಿ ಕೈಗೊಳ್ಳಲು ರೈತರನ್ನು ಪ್ರೇರೇಪಿಸುವ ಉದ್ದೇಶದಿಂದ ಎಲ್ಲ ಕೃಷಿ/ತೋಟಗಾರಿಕಾ ವಿಶ್ವವಿದ್ಯಾಲಯಗಳ ಮುಖಾಂತರ ತಲಾ 1,000 ಎಕರೆ ಪ್ರದೇಶದಲ್ಲಿ ನೖೆಸರ್ಗಿಕ ಕೃಷಿ ಪದ್ಧತಿಯಲ್ಲಿ ಸಾರಜನಕ ಸ್ಥಿರೀಕರಣ, ಜೈವಿಕ ವಿಶ್ಲೇಷಣೆ ಅಧ್ಯಯನಗಳನ್ನು ಕೈಗೊಂಡು ರೈತರ ಹೊಲಗಳಿಗೆ ವಿಸ್ತರಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 2 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸಾವಯವ ಕೃಷಿಯಡಿ ತರಲಾಗಿದ್ದು, ರಾಷ್ಟ್ರದಲ್ಲಿಯೇ ಸಾವಯವ ಉತ್ಪನ್ನಗಳ ಉತ್ಪಾದನೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

ಸಂಶೋಧನೆಗೆ ಸಹಕಾರ

  • ಹಿರೇಕೆರೂರಿನಲ್ಲಿ ಗೋವಿನ ಜೋಳ ಸಂಶೋಧನಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ.
  • ಧಾರವಾಡದ ಕೃಷಿ ವಿವಿಯಲ್ಲಿ ಡಾ. ಎಸ್.ವಿ. ಪಾಟೀಲ್ ಕೃಷಿ ಸಂಶೋಧನೆ, ತರಬೇತಿ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠ ಸ್ಥಾಪಿಸಲಾಗುವುದು.

ತೊಗರಿಗೆ ಬ್ರ್ಯಾಂಡ್​: ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಬೇಳೆಯನ್ನು ‘ಭೀಮಾ ಪಲ್ಸ್’ ಬ್ರಾ್ಯಂಡ್​ನಡಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ.

ರಫ್ತಿಗೆ ಪ್ರೋತ್ಸಾಹ: ಕೆಪೆಕ್ (KAPPEC) ಮುಖಾಂತರ ರೈತ ಉತ್ಪಾದಕರ ಸಂಸ್ಥೆಗಳಿಗೆ ಸಾಮಾನ್ಯಕೇಂದ್ರಗಳನ್ನು ಅಭಿವೃದ್ಧಿಪಡಿಸಿ, ಕೊಯ್ಲಿನೋತ್ತರ ನಿರ್ವಹಣೆ ಕೈಗೊಂಡು, ಅವುಗಳ ಉತ್ಪನ್ನಗಳನ್ನು ಮಾರಾಟ ಮತ್ತು ರಫ್ತು ಮಾಡಲು 50 ಕೋಟಿ ರೂ.ಗಳಲ್ಲಿ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ.

ಸೆಕೆಂಡರಿ ಕೃಷಿ ನಿರ್ದೇಶನಾಲಯ: ಕೃಷಿ ಉತ್ಪನ್ನ ಮಾರಾಟ ಮಾಡುವುದಕ್ಕಿಂತ ಅವುಗಳ ಮೌಲ್ಯವರ್ಧನೆ ಮಾಡಿದರೆ ರೈತರಿಗೆ ಆದಾಯ ಹೆಚ್ಚುವುದು ನಿಶ್ಚಿತ. ದರ ಕುಸಿತ ಸಂದರ್ಭದಲ್ಲಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿದರೆ ನಷ್ಟದಿಂದ ಪಾರಾಗಬಹುದು. ಈ ನಿಟ್ಟಿದಲ್ಲಿ ಹೆಜ್ಜೆ ಇಟ್ಟಿರುವ ಬೊಮ್ಮಾಯಿ, ರೈತರ ಆದಾಯ ಹೆಚ್ಚಿಸುವ ಧ್ಯೇಯದೊಂದಿಗೆ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ‘ಸೆಕೆಂಡರಿ ಕೃಷಿ ನಿರ್ದೇಶನಾಲಯ’ ಸ್ಥಾಪಿಸಲು ಮುಂದಾಗಿದ್ದಾರೆ. ರೈತ ಉತ್ಪಾದಕರ ಸಂಸ್ಥೆಗಳನ್ನು ಬಳಸಿ ಕೃಷಿಯ ಪ್ರಾಥಮಿಕ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ, ಈ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶ ಸೃಷ್ಟಿಸಲು ಇದು ಸಹಕಾರಿಯಾಗಲಿದೆ.

ಮಿನಿ ಆಹಾರ ಪಾರ್ಕ್: ಕೃಷಿ / ತೋಟಗಾರಿಕೆ ಉತ್ಪನ್ನ ಪೋಲಾಗುವುದನ್ನು ತಪ್ಪಿಸಿ, ಮೌಲ್ಯವರ್ಧನೆ ಉತ್ತೇಜಿಸಲು ಮತ್ತು ಸರಬರಾಜು ಸರಪಳಿಯನ್ನು ಸದೃಢಗೊಳಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಿನಿ ಆಹಾರ ಪಾರ್ಕ್​ಗಳನ್ನು ಹಂತ ಹಂತವಾಗಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಕೃಷಿ ಸಿಂಚಾಯಿ: ರಾಜ್ಯದ 57 ತಾಲೂಕುಗಳ ವ್ಯಾಪ್ತಿಯ 2.75 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ 642 ಕೋಟಿ ರೂ. ವೆಚ್ಚದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಘಟಕ 2.0 ಜಾರಿ.

ಹಾವೇರೀಲಿ ಮೆಗಾ ಡೇರಿ: ಹಾವೇರಿ ಜಿಲ್ಲೆಯಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯ ಮೆಗಾ ಡೇರಿ, ಕೆಎಂಎಫ್ ಸಹಯೋಗದಲ್ಲಿ ಶಿವಮೊಗ್ಗ, ದಾವಣಗೆರೆ- ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಜಿಲ್ಲಾ ಹಾಲು ಒಕ್ಕೂಟಗಳರಚನೆ.

2 ಕೃಷಿ ಕಾಲೇಜು: ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಒಂದು ಹೊಸ ಕೃಷಿ ಕಾಲೇಜನ್ನು ಡಿ.ಎಂ.ಎಫ್ ಮತ್ತು ಕೆ.ಕೆ.ಆರ್.ಡಿ.ಬಿ ಅನುದಾನಗಳನ್ನು ಸಂಯೋಜಿಸಿ ಸ್ಥಾಪಿಸ ಲಾಗುವುದು. ಇದಲ್ಲದೆ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಒಂದು ಹೊಸ ಕೃಷಿ ಕಾಲೇಜನ್ನು ಸ್ಥಾಪಿಸಲು ಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net