ರಾಜ್ಯ ಬಿಜೆಪಿ ಭಿನ್ನಮತ ಶಮನಕ್ಕೆ ವರಿಷ್ಠರು ಗಮನ ನೀಡಲಿ: ಡಿ.ವಿ.ಸದಾನಂದಗೌಡ ಅಭಿಮತ

sadanandagowda
Published on

ಬೆಂಗಳೂರು: ರಾಜ್ಯ ಬಿಜೆಪಿಯ ಅಂತಃಕಲಹ ಕಾರ್ಯಕರ್ತರು ನೊಂದಿದ್ದಾರೆ, ನನಗೂ ನೋವಾಗಿದೆ. ಭಿನ್ನಮತ ನಿಯಂತ್ರಿಸಲು ಪಕ್ಷದ ವರಿಷ್ಢರ ಮಧ್ಯೆ ಪ್ರವೇಶ ತುರ್ತು ಅಗತ್ಯವಿದೆ. ಈ ಬಗ್ಗೆ ಕೇಂದ್ರ ನಾಯಕರಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಯಾವುದೇ ಗುಂಪಿನ ಪರ, ವಿರೋಧವಾಗಿ ಮಾತನಾಡಲ್ಲ. ಪಕ್ಷದಲ್ಲಿ ಒಗ್ಗಟ್ಟು, ಕಾರ್ಯಕರ್ತರ ಹಿತವೇ ಮುಖ್ಯವಾಗಿದೆ ಎಂದರು.

ಯಾಕೋ ಏನೋ ಪಕ್ಷದ ವರಿಷ್ಠರು ನಮ್ಮ ಕಡೆ ಗಮನ ನೀಡುತ್ತಿಲ್ಲ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾದ ನಂತರವಾದರೂ ರಾಜ್ಯದ ಕಡೆ ಗಮನ ಕೊಡಬೇಕು ಎಂದು ಆಗ್ರಹಿಸಿದರು.

ನಮ್ಮಲ್ಲಿ ಸೆಲ್ಫ್ ಸ್ಟೈಲ್ ಲೀಡರ್ಸ್ ಬಹಳ ಜನರಿದ್ದಾರೆ. ಯಾರದು ತಪ್ಪು, ಒಪ್ಪು ಎಂದು ವಿಮರ್ಶೆ ಮಾಡಲು ಬಯಸುವುದಿಲ್ಲ. ಪ್ರತಿಷ್ಠೆಯ ತಿಕ್ಕಾಟದಿಂದ ಪಕ್ಷಕ್ಕೆ ಹಾನಿಯಾಗಿದೆ.

ತಪ್ಪು ಯಾರೇ ಮಾಡಿರಲಿ, ವರಿಷ್ಠರು ಮುಲಾಜಿಲ್ಲದೇ ಕ್ರಮಕೈಗೊಳ್ಳಬೇಕು. ಒಂದಿಬ್ಬರ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡರೆ ಎಲ್ಲವೂ ಸರಿಯಾಗುತ್ತದೆ ಎಂದು ಡಿ.ವಿ.ಸದಾನಂದಗೌಡ ಹೇಳಿದರು.

ನಾನು ಅಧ್ಯಕನಾಗಿದ್ದಾಗ ಇದಕ್ಕಿಂತ ದೊಡ್ಡ ಗುಂಪುಗಳಿದ್ದವು. ಇದಕ್ಕೂ ಮೊದಲು ಪಕ್ಷ ಕಟ್ಟಿದ್ದು ನಾವು ಎಂದು ಯಡಿಯೂರಪ್ಪ ಹಾಗೂ ಅನಂತಕುಮಾರ್ ಬಣಗಳು ಪ್ರಬಲವಾಗಿದ್ದವು. ಅಭಿಪ್ರಾಯ ಭೇದಗಳಿದ್ದರೂ ಒಳ ಜಗಳ ಬೀದಿಗೆ ಬಂದಿಲ್ಲ. ಆದರೆ ಈಗಿನ ಬೆಳವಣಿಗೆ ಪಕ್ಷದ ದೊಡ್ಡ ದುರಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‌ಗೆ ಲಾಭ

ಕಾಂಗ್ರೆಸ್ ಸರ್ಕಾರ ಹಲವಾರು ವಿಷಯಗಳನ್ನು ಚಿನ್ನದ ಬಟ್ಟಲಲ್ಲಿ ಇಟ್ಟು ಕೊಡುತ್ತಿದೆ. ಸರ್ಕಾರದ ನಿಜಬಣ್ಣ ಬಯಲುಗೊಳಿಸುವ, ಲಭ್ಯ ವಿಷಯಗಳ ಆಧಾರದಲ್ಲಿ ಸರ್ಕಾರದ ಕೈಕಟ್ಟಿ ಹಾಕುವ ಅವಕಾಶಗಳಿದ್ದು, ಆಂತರಿಕ ಸಮಸ್ಯೆಯಿಂದ ಪ್ರತಿಪಕ್ಷ ದುರ್ಬಲವಾಗಿದೆ ಎಂದು ಕನಲಿದರು.

ರಾಜ್ಯದ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ. ಸರ್ಕಾರ ಜನಮುಖಿಯಾಗಿ ಕೆಲಸ ಮಾಡುವುದಕ್ಕೆ ಒತ್ತಡ ಹೇರುವುದು ಪ್ರತಿಪಕ್ಷ ಜವಾಬ್ದಾರಿಯಾಗಿದೆ. ಆದರೆ ನಮ್ಮ ಪಕ್ಷದ ದೌರ್ಬಲ್ಯಗಳೇ ಆಡಳಿತ ಕಾಂಗ್ರೆಸ್‌ಗೆ ಲಾಭವಾಗಿದೆ ಎಂದು ಡಿ.ವಿ.ಸದಾನಂದಗೌಡ ವಿಶ್ಲೇಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net