ಕರೊನಾ ವಿಷಯದಲ್ಲಿ ಕರ್ನಾಟಕ ಇದೀಗ ಮತ್ತಷ್ಟು ನಿರಾಳ; ಯಾಕೆ? ಇಲ್ಲಿದೆ ವಿವರ..

Corona
Published on

ಬೆಂಗಳೂರು: ಕರೊನಾ ಸೋಂಕಿನ ವಿಚಾರದಲ್ಲಿ ಈ ವರ್ಷದ ಮೊದಲ ದಿನದಿಂದಲೇ ಪ್ರಕರಣ ಏರುತ್ತಲೇ ಬಂದಿದ್ದು, ದೈನಂದಿನ ಕರೊನಾ ಸೋಂಕಿನ ಸಂಖ್ಯೆ 50 ಸಾವಿರವನ್ನೂ ದಾಟಿ ಸಾರ್ವಜನಿಕರು ಹಾಗೂ ಸರ್ಕಾರ ಕಂಗೆಡುವಂತೆ ಮಾಡಿತ್ತು.

ಆದರೆ ಕಳೆದ ಕೆಲವು ದಿನಗಳಿಂದ ಕರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದ್ದು, ದಿನೇದಿನೆ ಸಮಾಧಾನ ಪಡುವಂತಹ ಸಂಗತಿಗಳೇ ಕಂಡುಬರುತ್ತಿವೆ. ಮಾತ್ರವಲ್ಲ ರಾಜ್ಯ ಇದೀಗ ಇನ್ನಷ್ಟು ಸಮಾಧಾನ ಪಡುವಂಥ ವಾತಾವರಣ ಉಂಟಾಗಿದೆ.

ಮೊನ್ನೆ ರಾಜಧಾನಿ ಬೆಂಗಳೂರಿನಲ್ಲಿ ಕರೊನಾ ಪಾಸಿಟಿವಿಟಿ ದರ ಒಂದಂಕಿಗೆ ಇಳಿದಿದ್ದರೆ, ನಿನ್ನೆ ರಾಜ್ಯದಲ್ಲಿನ ಕರೊನಾ ಪಾಸಿಟಿವಿ ದರವೂ ಒಂದಂಕಿಗೆ ಇಳಿದಿದೆ. ಅಂದರೆ ಫೆ.4ರಂದು ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ. 9.17ಕ್ಕೆ ಆಗಿದ್ದು, ಫೆ.5ರಂದು ರಾಜ್ಯದಲ್ಲಿನ ಕರೊನಾ ಪಾಸಿಟಿವಿಟಿ ದರ ಶೇ. 9.04ಕ್ಕೆ ಇಳಿದಿದೆ.

ಇಂದು ಇನ್ನೂ ಸಮಾಧಾನ ಪಡುವಂತಹ ಅಂಕಿ-ಅಂಶ ಹೊರಹೊಮ್ಮಿದೆ. ದೈನಂದಿನ ಕರೊನಾ ಪ್ರಕರಣ ಈ ಜ.1ರಂದು ಒಂದು ಸಾವಿರ ದಾಟಿ ನಂತರ ತೀವ್ರಗತಿಯಲ್ಲಿ ಏರಿ ದೈನಿಕ 50 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದೂ ಇದೆ. ಆದರೆ ಕಳೆದ ಕೆಲವು ದಿನಗಳಿಂದ ದೈನಂದಿನ ಕರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಯುತ್ತ ಬಂದಿದೆ. ಅದಾಗ್ಯೂ ರಾಜ್ಯದಲ್ಲಿನ ದೈನಿಕ ಕರೊನಾ ಪ್ರಕರಣಗಳ ಸಂಖ್ಯೆ ಹತ್ತು ಸಾವಿರದ ಮೇಲೆಯೇ ಇತ್ತು.

ಫೆ. 4ರಂದು ರಾಜ್ಯದಲ್ಲಿ ದೈನಂದಿನ ಕರೊನಾ ಪ್ರಕರಣ 14,950 ಆಗಿದ್ದು, ಫೆ. 5ರಂದು ಅದು 12,009 ಆಗಿತ್ತು. ಆದರೆ ಇಂದು ದೈನಿಕ ಕರೊನಾ ಪ್ರಕರಣಗಳ ಸಂಖ್ಯೆ ಹತ್ತು ಸಾವಿರಕ್ಕಿಂತಲೂ ಕೆಳಕ್ಕೆ ಇಳಿದಿದೆ. ಅಂದರೆ ಇವತ್ತು ರಾಜ್ಯದಲ್ಲಿ ಹೊಸದಾಗಿ 8,425 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.

ಇನ್ನೊಂದೆಡೆ ಪಾಸಿಟಿವಿಟಿ ದರದಲ್ಲೂ ಇನ್ನಷ್ಟು ಇಳಿಕೆಯಾಗಿದ್ದು, ಇಂದು ಅದು ಶೇ.6.5ಕ್ಕೆ ಕುಸಿದಿದೆ. ಅದಾಗ್ಯೂ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 47 ಮಂದಿ ಕರೊನಾಗೆ ಬಲಿಯಾಗಿದ್ದು, ಜನರು ನಿರ್ಲಕ್ಷ್ಯ ವಹಿಸುವಂತಿಲ್ಲ ಎಂಬುದನ್ನು ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net