ಗ್ಯಾರಂಟಿಗಳಿಂದ ಆರ್ಥಿಕವಾಗಿ ರಾಜ್ಯ ದಿವಾಳಿ; ಮಾಜಿ ಸಿಎಂ ಬಿಎಸ್ ವೈ ಟೀಕೆ

Yadiyurappa
Published on

ಬೆಂಗಳೂರು: ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದರಿಂದ ನೀರಾವರಿ, ರಸ್ತೆ‌ ಸೇರಿ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ. ಬರ ಹಾಗೂ‌ ವಿದ್ಯುತ್‌ ಬವಣೆ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಲಾಗದೆ ಸರ್ಕಾರ ಕೈಚೆಲ್ಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಆದ್ಯತೆಯ ಮೇಲೆ ಕೆಲಸಗಳನ್ನು ಗುರುತಿಸಿ, ಒಂದಿಷ್ಟು ಅನುದಾನ ಬಿಡುಗಡೆ ಮಾಡಿ ತುರ್ತು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು. ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ದೊಡ್ಡ ಪ್ರಮಾಣದಲ್ಲಿ ಹಣ ಪತ್ತೆಯಾಗಿದೆ.

ಪಂಚರಾಜ್ಯಗಳ ಚುನಾವಣೆಗೆ ಕಳುಹಿಸಲು ಈ ಹಣ ಸಂಗ್ರಹಿಸಲಾಗಿತ್ತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ. ಸತ್ಯಾಂಶ ಹೊರಲು ಇಡಿ ತನಿಖೆಗೆ ಒಪ್ಪಿಸಿ ಎಂದು ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಚುನಾವಣೆಗೆ ಹಣ ಸಂಗ್ರಹಿಸಲು ಒತ್ತು ನೀಡಿರುವುದು ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ ಎಂದೂ ದೂರಲಾಗುತ್ತಿದೆ.

ದೊಡ್ಡ ಪ್ರಮಾಣದಲ್ಲಿ ಪತ್ತೆಯಾದ ಹಣಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲವೆಂದಾದರೆ ಆಗ್ರಹಗಳಿಗೆ ಸ್ಪಂದಿಸಿ ಸಿಬಿಐ, ಇಡಿ ತನಿಖೆಗೆ ಒಪ್ಪಿಸಲಿ, ಸತ್ಯಾಂಶ ಹೊರಬರಲಿ ಎಂದು ಯಡಿಯೂರಪ್ಪ ಸವಾಲೆಸೆದರು.

ಗೊತ್ತಿದ್ದೂ ತಟಸ್ಥ

ಮಳೆ ಕೊರತೆಯಿಂದ ಕುಡಿಯುವ ನೀರು, ವಿದ್ಯುತ್ ಮತ್ತಿತರ ಕನಿಷ್ಠ ಅವಶ್ಯಕತೆಗಳಿಗೆ ಸಮಸ್ಯೆಯಾಗುತ್ತದೆ. ನೀರಾವರಿ ಪಂಪ್ ಸೆಟ್ ಗಳ ಬಳಕೆ ಹೆಚ್ಚಿ, ವಿದ್ಯುತ್ ಉತ್ಪಾದನೆ ಕುಸಿತ ಹಾಗೂ ಬೇಡಿಕೆ ಹೆಚ್ಚುತ್ತದೆ ಎಂದು ಗೊತ್ತಿದ್ದೂ ಸರ್ಕಾರ ತಟಸ್ಥವಾಗಿದೆ. ಪೂರ್ವಸಿದ್ಧತೆಗೆ ಸಾಕಷ್ಟು ಕಾಲಾವಕಾಶವಿದ್ದರೂ ಕೈಚೆಲ್ಲಿದ ಪರಿಣಾಮ ವಿದ್ಯುತ್ ಅಭಾವ ಉಲ್ಬಣಿಸಿದೆ ಎಂದು ಯಡಿಯೂರಪ್ಪ ವಾಗ್ದಾಳಿ ಮಾಡಿದರು.

ಬರಗಾಲದಿಂದ ಅನ್ನದಾತರು ಕಂಗೆಟ್ಟಿದ್ದಾರೆ. ಲಭ್ಯ ನೀರು ಬಳಸಿ ಬೆಳೆ ಉಳಿಸಿಕೊಳ್ಳಲು ಅನ್ನದಾತರು ಪರದಾಡುತ್ತಿದ್ದು, ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಬೇರೆ ಮೂಲದಿಂದ ವಿದ್ಯುತ್ ಖರೀದಿಸಿ ಮೂರು ಫೇಸ್ ನಿರಂತರ ಏಳು ವಿದ್ಯುತ್ ಪೂರೈಸಲಿ ಆಗ್ರಹಿಸಿದರು.

ವಿದ್ಯುತ್ ಇಲ್ಲದೇ ಜನರ ಪಡಿಪಾಟಲು ಹೆಚ್ಚಾಗಿದೆ. ಇಂತಹ ಸಂಕಷ್ಟ ಕಾಲದಲ್ಲಿ ವಿದ್ಯುತ್ ವೆಚ್ಚ ಹೊಂದಾಣಿಕೆ ಶುಲ್ಕದ ಹೆಸರಿನಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ ಹೆಚ್ಚಳದ ಪ್ರಸ್ತಾಪ ಖಂಡನೀಯ. ಈ ಜನರ ತಲೆ ಮೇಲೆ ಹೆಚ್ಚುವರಿ ಭಾರ ಹೊರಿಸುವುದನ್ನು ಬಲವಾಗಿ ವಿರೋಧಿಸುವೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net