ಈಡೇರಿದ ರಾಜ್ಯ ವಕೀಲರ ಬಯಕೆ : ಹಿಂಸಾಚಾರ ನಿಷೇಧ ಕಾಯ್ದೆ ಜಾರಿ ಸರ್ಕಾರ ಅಧಿಸೂಚನೆ

highcourt
Published on

ಬೆಂಗಳೂರು: ರಾಜ್ಯದ ವಕೀಲ ಸಮುದಾಯದ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದ್ದು, ವಕೀಲರ ರಕ್ಷಣೆಗೆ ಸಂಬಂಧಿಸಿದ ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ-2023’ ಜಾರಿಗೆ ಬಂದಿದೆ.

ಈ ಸಂಬಂಧ ರಾಜ್ಯ ಸರ್ಕಾರ ಜೂ.10ರಂದು ಗೆಜೆಟ್ ಅಧಿಸೂಚನೆ ಪ್ರಕಟಿಸಿದ್ದು, ಆ ದಿನದಿಂದಲೇ ಕಾಯ್ದೆ ಜಾರಿಗೆ ಬರಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಅದರಂತೆ, ಇನ್ನು ಮುಂದೆ ವಕೀಲರು ತಮ್ಮ ವೃತ್ತಿಪರ ಕರ್ತವ್ಯಗಳನ್ನು ನಿರ್ವಸುತ್ತಿರುವಾಗ ಅವರ ಮೇಲೆ ಹಲ್ಲೆ ನಡೆಸುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಬೆದರಿಕೆ ಹಾಕುವುದು ಅಥವಾ ಕಿರುಕುಳ ನೀಡುವುದು ನಿಷೇಧಿಸಲಾಗಿದ್ದು, ಒಂದೊಮ್ಮೆ ಇಂತಹ ಕೃತ್ಯಗಳು ನಡೆದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗಲಿದೆ.

ಯಾವುದೇ ವ್ಯಕ್ತಿಯು ನ್ಯಾಯವಾದಿಯ ಮೇಲೆ ಹಿಂಸಾಚಾರ ಕೃತ್ಯ ಎಸಗತಕ್ಕದಲ್ಲ. ಒಂದು ವೇಳೆ ಹಲ್ಲೆ, ಹಿಂಸಾಚಾರ ನಡೆಸಿದರೆ ಅಂತಹ ವ್ಯಕ್ತಿಯು ಆರು ತಿಂಗಳಿಂದ ಮೂರು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ.ಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆ (ದಂಡ) ಭರಿಸಬೇಕಾಗುತ್ತದೆ. ಅಥವಾ ಜೈಲುವಾಸ ಮತ್ತು ದಂಡ ಎರಡರಿಂದಲೂ ಶಿಕ್ಷಿತನಾಗಬಹುದು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.

ಕಾಯ್ದೆಯ ಪ್ರಮುಖ ಅಂಶಗಳು

-ವಕೀಲರು ಬೆದರಿಕೆ, ಅಡ್ಡಿ, ಕಿರುಕುಳ ಅಥವಾ ಅನುಚಿತ ಹಸ್ತಕ್ಷೇಪರಹಿತವಾಗಿ ತಮ್ಮ ಎಲ್ಲ ವೃತ್ತಿಪರ ಕಾರ್ಯ ಮತ್ತು ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗತಕ್ಕದ್ದು.

-ವಕೀಲರು ದೇಶ ಮತ್ತು ವಿದೇಶ ಎರಡರಲ್ಲಿಯೂ ಮುಕ್ತವಾಗಿ ಪ್ರಯಾಣಿಸಲು ಮತ್ತು ಅವರ ಕಕ್ಷಿದಾರರೊಂದಿಗೆ ಸಮಾಲೋಚಿಸಲು ಸಾಧ್ಯವಾಗಬೇಕು.

-ವಕೀಲರು ಮಾನ್ಯ ಮಾಡಿದ ವೃತ್ತಿಪರ ಕರ್ತವ್ಯಗಳು, ಮಾನಕಗಳು ಮತ್ತು ನೈತಿಕತೆಗಳ ಅನುಸಾರವಾಗಿ ತೆಗೆದುಕೊಂಡ ಕ್ರಮಕ್ಕಾಗಿ ಅಭಿಯೋಜನೆ ಅಥವಾ ಆಡಳಿತಾತ್ಮಕ, ಆರ್ಥಿಕ ಅಥವಾ ಇತರೆ ನಿರ್ಬಂಧಗಳನ್ನು ಅನುಭವಿಸತಕ್ಕದ್ದಲ್ಲ ಅಥವಾ ಭಯಪಡತಕ್ಕದ್ದಲ್ಲ ಎಂಬುದನ್ನು ಸರ್ಕಾರ ಖಚಿತಪಡಿಸಬೇಕು.

-ವಕೀಲರ ತಮ್ಮ ಕರ್ತವ್ಯ ನಿರ್ವಹಣೆ ಮಾಡುವಾಗ ಅವರ ಭದ್ರತೆಗೆ ಬೆದರಿಕೆ ಒಡ್ಡಿದಾಗ ಸಂಬಂಧಿಸಿದ ಪ್ರಾಧಿಕಾರಗಳ ಅವರನ್ನು ಸಂಪೂರ್ಣವಾಗಿ ಸಂರಕ್ಷಿಸುವುದು.

- ನ್ಯಾಯವಾದಿಗಳು ಯಾವುದೇ ಭಯ ಅಥವಾ ಬಾಹ್ಯ ಪ್ರಭಾವಕ್ಕೆ ಒಳಗಾಗದೆ ತಮ್ಮ ವೃತ್ತಿಪರ ಸೇವೆಗಳನ್ನು ಸಲ್ಲಿಸುವುದಕ್ಕಾಗಿ ಹಾಗೂ ಅದಕ್ಕೆ ಸಂಬಂಧಿಸಿದ ಮತ್ತು ಪ್ರಾಸಂಗಿಕವಾದ ವಿಷಯಗಳಿಗಾಗಿ ಅವರ ಮೇಲಿನ ಹಿಂಸೆಯನ್ನು ನಿಷೇಧಿಸಿ ಅವರಿಗೆ ರಕ್ಷಣೆ ನೀಡುವುದು ಕಾಯ್ದೆಯ ಮೂಲ ಉದ್ದೇಶ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net