

ಬೆಂಗಳೂರು: ಕಾಂಗ್ರೆಸ್ ಗೆ ವೋಟು ಹಾಕಿದರೆ ಕುಡಿಯಲು ಕಾವೇರಿ ನೀರು ಪೂರೈಸುತ್ತೇವೆ, ಸಿಎ ಸೈಟ್ ಕೊಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬೆದರಿಕೆ ಹಾಕಿದ್ದನ್ನು ವಿಡಿಯೋ ಸಹಿತ ದೂರು ಕೊಟ್ಟರೂ ಕ್ರಮವಾಗಿಲ್ಲ. ಅತಿ ಸೂಕ್ಷ್ಮ ಕ್ಷೇತ್ರವೆಂದು ಬೆಂಗಳೂರು ಗ್ರಾಮಾಂತರವನ್ನು ಪರಿಗಣಿಸಲು ಘಟನೆಗಳ ಪುರಾವೆ ಸಹಿತ ಮನವಿ ಮಾಡಿದರೂ ಸ್ಪಂದನೆಯಿಲ್ಲ. ರಾಜ್ಯದ ಆಡಳಿತ ಯಂತ್ರ ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿದೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಆರೋಪಿಸಿದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸೋಮವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯ ದಾಖಲೆ, ಪೂರಕ ಮಾಹಿತಿಯೊಂದಿಗೆ ಚುನಾವಣಾ ವೆಚ್ಚಕ್ಕೆ ಪಕ್ಷ ಸಾಗಿಸುತ್ತಿದ್ದ ಎರಡು ಕೋಟಿ ರೂ.ಗಳನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಎಲ್ಲವನ್ನು ಪರಿಶೀಲಿಸಿ ಅಕ್ರಮವಾಗಿ ಹಣ ಸಾಗಿಸುತ್ತಿಲ್ಲ ಎಂದು ದೃಢಪಡಿಸಿದ್ದಾರೆ. ಆದರೂ ಪೊಲೀಸರು ಎಫ್ ಐಆರ್ ದಾಖಲಿಸಿ ಹಣವನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದು, ಈ ಕ್ರಮದ ವಿರುದ್ಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ದುರ್ವರ್ತನೆ, ಬೆದರಿಕೆಗಳ ಬಗ್ಗೆ ಪುರಾವೆ ಸಹಿತ ದೂರು ಸಲ್ಲಿಸಿದರೂ ಎಫ್ಐಆರ್ ದಾಖಲಿಸಿಲ್ಲ. ಚುನಾವಣಾ ಪ್ರಚಾರದಿಂದ ನಿರ್ಬಂಧಿಸಬೇಕು ಎಂಬ ಮನವಿಗೂ ಸ್ಪಂದಿಸಿಲ್ಲ. ಇದರಿಂದಾಗಿ ಆಡಳಿತ ವ್ಯವಸ್ಥೆ ಸಂಪೂರ್ಣ ಕಾಂಗ್ರೆಸ್ ಆಣತಿಯಂತೆ ನಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ ಎಂದರು.
ಸಿಇಟಿಗೆ ಪಠ್ಯ ಹೊರತಾದ ಪ್ರಶ್ನೆ ( ಔಟ್ ಆಫ್ ಸಿಲೆಬಸ್) ಪತ್ರಿಕೆ ನೀಡಿ, ಮೂರು ಲಕ್ಷ ಅಭ್ಯರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಲಾಗಿದೆ. ಅತ್ಯಂತ ಗಂಭೀರವಾದ ಈ ಪ್ರಮಾದದ ಬಗ್ಗೆ ಕಾಂಗ್ರೆಸ್ ಸರ್ಕಾರ ಕ್ರಮಕೈಗೊಂಡಿಲ್ಲ. ಇನ್ನೂ ನಿದ್ರಾಲೋಕದಿಂದ ಹೊರ ಬಂದಂತಿಲ್ಲ. ಸಿಇಟಿ ಔಟ್ ಆಫ್ ಸಿಲೆಬಸ್, ಕಾಂಗ್ರೆಸ್ ಪಕ್ಷವೂ ಔಟ್ ಆಫ್ ಸಿಲೆಬಸ್ ಆಗಿದ್ದು, ಲೋಕಸಭೆ ಚುನಾವಣೆಯಲ್ಲಿ ಜನರಿಂದ ತಿರಸ್ಕೃತವಾಗಲಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಛೇಡಿಸಿದರು.
ಪ್ರತಿಯೊಂದರಲ್ಲೂ ಹಣ ಹೊಡೆಯಲು ಕಾಂಗ್ರೆಸ್ ಹೆಚ್ಚಿನ ಆಸಕ್ತಿವಹಿಸಿದೆ. ಬೆಂಗಳೂರು ಟೆಕ್ ಸಿಟಿ ಹೋಗಿ ಟ್ಯಾಂಕರ್ ಸಿಟಿಯಾಗಿದೆ. ವಾಟರ್ ಮಾಫಿಯಾ ಕೈವಾಡದಿಂದ ಪ್ರತಿ ಟ್ಯಾಂಕರ್ ನೀರಿನ ಬೆಲೆ ದುಬಾರಿಯಾಗಿದೆ. ನೀರಿನ ಕೃತಕ ಅಭಾವ ಸೃಷ್ಟಿಸಿ ಹಣ ಮಾಡಿಕೊಳ್ಳುವ ದಂಧೆ ನಡೆದಿದೆ ಎಂದು ದೂರಿದರು.
ಸಮಾಜ ಘಾತುಕರ, ಉಗ್ರ ಕೃತ್ಯಗಳನ್ನು ಖಂಡಿಸಲು ಕಾಂಗ್ರೆಸ್ ಹಿಂಜರಿಯುತ್ತಿದೆ. ಬಾಂಬ್ ಸ್ಫೋಟಿಸಿದವರನ್ನು ಬ್ರದರ್ಸ್ ಎಂದು ಕರೆಯುತ್ತಾರೆ. ನೇಹಾ ಹಿರೇಮಠ ಬರ್ಬರ ಹತ್ಯೆ ತನಿಖೆಗೆ ಮುನ್ನವೇ ವೈಯಕ್ತಿಕವೆಂದು ಹೇಳಿಕೆ ನೀಡುತ್ತಾರೆ. ಮೃತ ಯುವತಿ ತಂದೆ ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್ ಆಗಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಒತ್ತಾಯಿಸಿ, ಕಾಂಗ್ರೆಸ್ ಸರ್ಕಾರದ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ವಾಗ್ದಾಳಿ ಮಾಡಿದರು.