ಜಿಯೋ ಆರಂಭಿಸಿದ್ದೇ ಜೀವನದ ದೊಡ್ಡ ರಿಸ್ಕ್

4-685c3bf0873ae
Published on

ನವದೆಹಲಿ: ಶತಕೋಟ್ಯಧಿಪತಿ ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ 2016ರಲ್ಲಿ ರಿಲಯನ್ಸ್ ಜಿಯೋದೊಂದಿಗೆ ದೂರಸಂಪರ್ಕ ಉದ್ಯಮಕ್ಕೆ ಮರಳಿದ್ದನ್ನು ತಮ್ಮ ಜೀವನದ ಅತಿದೊಡ್ಡ ರಿಸ್ಕ್ ಎಂದು ಹೇಳಿದ್ದಾರೆ.

‘ನಾನು ಜಿಯೋಗೆ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾದಾಗ ಬಹಳಷ್ಟು ವಿಶ್ಲೇಷಕರು ಹೆದರಿಸಿದರು. ಭಾರತವಿನ್ನೂ ಇಷ್ಟು ಅತ್ಯಾಧುನಿಕ ತಂತ್ರಜ್ಞಾನಕ್ಕೆ ಸಿದ್ಧವಾಗಿಲ್ಲ, ಹಾಗಾಗಿ ಆರ್ಥಿಕವಾಗಿ ಫೇಲ್ ಆಗಬಹುದು ಅಂತ ಎಚ್ಚರಿಸಿದರು. ಆದರೂ, ನಾನು ಇದರಿಂದ ಹಣ ನಷ್ಟವಾದರೂ ಭಾರತದ ಡಿಜಿಟಲ್ ಸ್ವರೂಪವನ್ನೇ ಬದಲಿಸಬಹುದಲ್ಲ ಎಂಬ ಲೆಕ್ಕಾಚಾರದೊಂದಿಗೆ ಮುನ್ನುಗ್ಗಿದೆ’ ಎಂದು ಮೆಕಿನ್ಸೆಗೆ ನೀಡಿರುವ ಸಂದರ್ಶನದಲ್ಲಿ ಅಂಬಾನಿ ತಿಳಿಸಿದ್ದಾರೆ.

ಜಿಯೋ ಶುರುವಾಗುವುದಕ್ಕಿಂತ ಮುಂಚೆ ದೇಶದಲ್ಲಿ ಮೊಬೈಲ್ ಇಂಟರ್​ನೆಟ್ ದುಬಾರಿಯಾಗಿತ್ತು. ಹಣ ಇರುವವರಿಗೆ ಮಾತ್ರ ಕೈಗೆಟಕುವಂತಿತ್ತು. ಉಚಿತ ಧ್ವನಿ ಕರೆ ಮತ್ತು ಕಡಿಮೆ ವೆಚ್ಚದ ಡೇಟಾ ಒದಗಿಸುವ ಮೂಲಕ ಜಿಯೋ ಭಾರತದ ದೂರಸಂಪರ್ಕ ಮಾರುಕಟ್ಟೆಯಲ್ಲಿ ಕ್ರಾಂತಿ ಉಂಟು ಮಾಡಿತು. ಪ್ರತಿಸ್ಪರ್ಧಿ ಕಂಪನಿಗಳೂ ದರ ಕಡಿಮೆ ಮಾಡುವುದು ಅನಿವಾರ್ಯವಾಯಿತು. ಜನರಿಗೆ ಅಗ್ಗದ ದರದ ಇಂಟರ್ನೆಟ್ ಸಿಗುವಂತಾಯಿತು, ಗ್ರಾಮೀಣ ಮತ್ತು ದುರ್ಗಮ ಪ್ರದೇಶಗಳಿಗೂ ಸೇವೆ ವಿಸ್ತರಿಸಿತು. ಮನರಂಜನೆ, ಇ-ಕಾಮರ್ಸ್, ಫಿನ್​ಟೆಕ್, ಎಡ್​ಟೆಕ್ ಸೇವೆಗಳೂ ಬೆಳೆದವು ಎಂದು ವಿವರಿಸಿದ್ದಾರೆ.

‘ನಾವು ಈ ಜಗತ್ತಿಗೆ ಏನೂ ತೆಗೆದುಕೊಂಡು ಬಂದಿಲ್ಲ, ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಅಂತಿಮವಾಗಿ, ಜನರಿಗೆ ನಾವು ಏನು ಕೊಟ್ಟೆವು ಎಂಬುದಷ್ಟೇ ಉಳಿಯುತ್ತದೆ. ಇದೇ ನನ್ನ ನಂಬಿಕೆ. ನಾವು ಹೋದ ಬಳಿಕವೂ ರಿಲಯನ್ಸ್ ಉಳಿಯಬೇಕು ಎಂಬುದಾಗಿ ನನ್ನ ತಂದೆ ಧೀರೂಭಾಯ್ ಅಂಬಾನಿ ಹೇಳುತ್ತಿದ್ದರು. 2027ರಲ್ಲಿ ರಿಲಯನ್ಸ್​ಗೆ ಸುವರ್ಣ ಮಹೋತ್ಸವ ಸಂಭ್ರಮ. 100 ವರ್ಷ ಪೂರೈಸಿದ ನಂತರವೂ ಈ ಸಂಸ್ಥೆಯು ದೇಶದ ಜನರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸಬೇಕು ಎಂಬುದು ನನ್ನ ಬಯಕೆ’ ಎಂದು ಅಂಬಾನಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net