ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳಿಂದ ಮತ್ತೆ ಲಾಬಿ ಶುರು

B Y Vijayendra
Published on

ಬೆಂಗಳೂರು: ವಿಧಾನ ಪರಿಷತ್​ನ ವಿವಿಧ ಸ್ಥಾನಗಳಿಗೆ ಚುನಾವಣೆ ದಿನಾಂಕ ಪ್ರಕಟವಾಗುವ ಮುನ್ನವೇ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಹಲವು ಶಾಸಕರು ಮತ್ತೆ ತೆರೆಮರೆಯಲ್ಲಿ ಲಾಬಿ ಶುರು ಮಾಡಿದ್ದು, ಇದರಿಂದಾಗಿ ಮತ್ತೊಂದು ಸುತ್ತಿನ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಗರಿಗೆದರಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆಂಗಳೂರಿನಲ್ಲಿದ್ದಾಗ ಭೇಟಿಗೆ ಪ್ರಯತ್ನಿಸಿದ್ದ ಕೆಲ ಶಾಸಕರಿಗೆ ‘ಒಂದೆರಡು ದಿನ ಬಿಟ್ಟು ದೆಹಲಿಗೆ ಬನ್ನಿ’ ಎಂಬ ಸಂದೇಶ ಲಭಿಸಿದೆ. ಹೀಗಾಗಿ ಶಾಸಕರ ತಂಡವೊಂದು ಪೂರ್ವಭಾವಿ ತಾಲೀಮು ನಡೆಸಿ ದೆಹಲಿಗೆ ತೆರಳಲು ಸಜ್ಜಾಗಿದೆ.

ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಹಿತ ಹಲವು ನಾಯಕರ ಭೇಟಿಗೂ ಆ ತಂಡ ಉತ್ಸುಕವಾಗಿದೆ. ಸಚಿವ ಸ್ಥಾನಕ್ಕಾಗಿ ಪ್ರಬಲ ಲಾಬಿ ನಡೆಸುವುದೇ ದೆಹಲಿಯತ್ತ ಚಿತ್ತ ನೆಟ್ಟಿದ್ದರ ಮುಖ್ಯ ಉದ್ದೇಶವಾಗಿದ್ದು, ಮೇಲ್ನೋಟಕ್ಕೆ ವಿಭಿನ್ನ ಕಾರಣ ನೀಡಲಾಗುತ್ತಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ವಿಧಾನ ಮಂಡಲದ ಬಜೆಟ್ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಿಂತನೆ ನಡೆಸಿದ್ದು, ತೆರೆಮರೆ ಲಾಬಿ ಮತ್ತೆ ಚುರುಕಾಗುವುದಕ್ಕೆ ಇದೂ ಒಂದು ಕಾರಣವೆಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಚಿಂತನೆ: ಉಮೇಶ ಕತ್ತಿ, ಅರವಿಂದ ಲಿಂಬಾವಳಿ ಜತೆಗೆ ಇನ್ನೂ ಒಂದಿಬ್ಬರು ಪಕ್ಷ ಮೂಲದ ಶಾಸಕರನ್ನು ಸೇರಿಸಿಕೊಂಡು ಸಚಿವ ಸಂಪುಟ ವಿಸ್ತರಿಸುವುದಕ್ಕೆ ಸಿಎಂ ಒಲವಿದ್ದು, ಖಾಲಿಯಿರುವ 6ರ ಪೈಕಿ 4 ಸ್ಥಾನ ಮಾತ್ರ ತುಂಬುವ ಚಿಂತನೆ ನಡೆಸಿದ್ದಾರೆ.

ಬೆರಳೆಣಿಕೆಯಷ್ಟು ಖಾಲಿ ಸ್ಥಾನಗಳಿದ್ದರೆ, ಆಕಾಂಕ್ಷಿಗಳ ಸಂಖ್ಯೆ 20ಕ್ಕೂ ಹೆಚ್ಚಿದೆ. ಪ್ರದೇಶ, ಜಿಲ್ಲೆ, ಜಾತಿವಾರು ಲೆಕ್ಕಾಚಾರದಂತೆ ಸಂಪುಟ ಪುನಾರಚನೆಯೇ ಸೂಕ್ತವೆಂಬ ಒತ್ತಡ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ವರಿಷ್ಠರ ಲೆಕ್ಕಾಚಾರ ಏನಿದೆ ಎಂಬುದು ಸದ್ಯಕ್ಕೆ ನಿಗೂಢ. ಕಳೆದ ಬಾರಿ ಸಂಪುಟ ವಿಸ್ತರಿಸುವಾಗ ವರಿಷ್ಠರ ಸಲಹೆಯಂತೆ ಪಕ್ಷ ಮೂಲದ ಶಾಸಕರನ್ನು ಬಿಎಸ್​ವೈ ಕೊನೇ ಗಳಿಗೆಯಲ್ಲಿ ಕೈಬಿಟ್ಟಿದ್ದರು.ಉಪ ಚುನಾವಣೆಯಲ್ಲಿ ಗೆದ್ದ ಶಾಸಕರನ್ನು ಸೇರಿಸಿಕೊಳ್ಳುವುದಕ್ಕೆ ಈ ವಿಸ್ತರಣೆ ಸೀಮಿತವಾಯಿತು. ಇದರಿಂದಾಗಿ ಅಸಮಾಧಾನಿತ ಶಾಸಕರನ್ನು ಸಂತೈಸುವ ಸಂದೇಶ ವರಿಷ್ಠರು ರವಾನಿಸಿದ್ದರು. ಈ ಭರವಸೆ ಮುಂದಿಟ್ಟುಕೊಂಡು ಆಕಾಂಕ್ಷಿಗಳು ಮತ್ತೆ ಒತ್ತಡ ಹಾಕುತ್ತಿದ್ದಾರೆ. ಪಕ್ಷದ ಸಂಘಟನೆಗೆ ತಪು್ಪ ಸಂದೇಶ ರವಾನೆಯಾಗುವುದನ್ನು ತಪ್ಪಿಸುವುದು ಸಿಎಂ, ನಾಯಕರ ಕರ್ತವ್ಯವಾಗಿದೆ ಎಂದು ನೆನಪಿಸಲಾರಂಭಿಸಿದ್ದಾರೆ.

ವಿಜಯೇಂದ್ರ ವರ್ಚಸ್ಸಿನ ಮೇಲೆ ಹಲವರ ಕಣ್ಣು

ದಿನಗಳೆದಂತೆ ಪಕ್ಷದ ಹೊರ-ಒಳಗೆ ಬಿಎಸ್​ವೈ ಪುತ್ರ ಬಿ.ವೈ.ವಿಜಯೇಂದ್ರ ವರ್ಚಸ್ಸು ಹೆಚ್ಚುತ್ತಿದೆ. ಅದರಲ್ಲೂ ಹೊಸ ಶಾಸಕರ ಪಾಲಿಗೆ ಪಕ್ಷ ಹಾಗೂ ಸರ್ಕಾರದ ಮಧ್ಯೆ ಕೊಂಡಿಯಂತಾಗಿದ್ದು, ಇಷ್ಟು ಸಾಲದೆಂಬಂತೆ ಪಕ್ಷದ ಕಾರ್ಯಕರ್ತರ ಕುಂದು-ಕೊರತೆ ಅಹವಾಲು ತ್ವರಿತವಾಗಿ ಬಗೆಹರಿಸುತ್ತಾರೆ. ಇದು ಹಲವರ ಕಣ್ಣು ಕೆಂಪಾಗಿಸಿದೆ. ಬಿಎಸ್​ವೈ ಜತೆ ನೇರ ಮಾತುಕತೆಗೆ ಹಿಂಜರಿಯುವ ಹಲವು ಮುಖಂಡರಿಗೆ ವಿಜಯೇಂದ್ರ ಸುಲಭ ಮಾರ್ಗದಂತೆ ಗೋಚರಿಸಿದ್ದಾರೆ. ಇದು ಒಂದಷ್ಟು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಬೆಳವಣಿಗೆ ಬಗ್ಗೆ ಪಕ್ಷದ ವರಿಷ್ಠರಿಗೆ ದೂರು ಮುಟ್ಟಿಸಲು ಪ್ರಯತ್ನ ನಡೆಸಿದ್ದಾರೆನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net