

ಕೆ.ಆರ್.ಪೇಟೆ: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು(ವೆಂಕಟರಮಣೇಗೌಡ) ಕೆ.ಆರ್.ಪೇಟೆ, ನಾಗಮಂಗಲ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಿದರು.
ಕೆ.ಆರ್.ಪೇಟೆ ತಾಲೂಕಿನ ಭಾರತೀಪುರ, ಅಘಲಯ, ಸಂತೆಬಾಚಹಳ್ಳಿ, ರಂಗನಾಥಪುರ ಕ್ರಾಸ್, ಸಾರಂಗಿ ಪಂಚಾಯಿತಿಯಲ್ಲಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಪ್ರಕಾಶ್, ಬಿ.ಎಲ್.ದೇವರಾಜ್ ಸೇರಿದಂತೆ ಕಾಂಗ್ರೆಸ್ ಮುಖಂಡರೊಂದಿಗೆ ಮತಯಾಚಿಸಿದರು. ಅಂತೆಯೇ ನಾಗಮಂಗಲ ತಾಲೂಕಿನಲ್ಲಿ ಸಚಿವ ಚಲುವರಾಯಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ ಸಾಥ್ ನೀಡಿದರು. ಅಂಚೆಚಿಟ್ಟನಹಳ್ಳಿ, ಹುಲಿಕೆರೆ, ಗೊಂಡೇನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದರು.
ಸ್ಟಾರ್ ಚಂದ್ರು ಮಾತನಾಡಿ, ಜನರು ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳನ್ನು ಮೆಚ್ಚಿ ಈ ಬಾರಿ ನಮ್ಮ ಕೈ ಹಿಡಿಯಲಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಜತೆಗೆ ರಾಷ್ಟ್ರೀಯ ಕಾಂಗ್ರೆಸ್‌ನಿಂದ ನೀಡಿರುವ 25 ಭರವಸೆಗಳ ಮಾಹಿತಿಯನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಾನು ಇದೇ ಜಿಲ್ಲೆಯವನು. ನಿಮ್ಮ ಮಧ್ಯೆ ಇರುತ್ತೇನೆ. ಜನರು ಮತ್ತು ಸರ್ಕಾರದ ಕೊಂಡಿಯಾಗಿ ಕೆಲಸ ಮಾಡುತ್ತೇನೆ. ಪ್ರತಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿದ್ದೇನೆ. ನೀರಾವರಿ, ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಕಾಂಗ್ರೆಸ್ ಸರ್ಕಾರದ ಯೋಜನೆಗಳು ಪಕ್ಷಾತೀತವಾಗಿ ಎಲ್ಲರಿಗೂ ತಲುಪಿದೆ. ರಾಜ್ಯದ ಮಾದರಿಯಲ್ಲಿ ದೇಶದ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂ.ಗಳನ್ನು ಪಕ್ಷಾತೀತವಾಗಿ ನೀಡಲು ರಾಷ್ಟ್ರೀಯ ಕಾಂಗ್ರೆಸ್ ಘೋಷಿಸಿದೆ. ಇದರ ಜತೆಗೆ ಸಾಲಮನ್ನಾ, ನರೇಗಾ ಕೂಲಿ 400 ರೂ.ಗೆ ಹೆಚ್ಚಿಸಿರುವುದು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದರು.