ಲೋಕಸಭಾ ಚುನಾವಣಾ ಕಣದಲ್ಲಿನ ಅಭ್ಯರ್ಥಿಗಳಿಗೆ ಸ್ಟಾರ್ ಪ್ರಚಾರಕರ ಬಲ

20CBP2e
Published on

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರು, ಘಟಾನುಘಟಿ ನಾಯಕರ ಕ್ಷೇತ್ರ ಪ್ರವಾಸ ಮತ್ತು ಬಿರುಸಿನ ಪ್ರಚಾರವು ಅಭ್ಯರ್ಥಿಗಳ ಬಲಾಬಲ ಹೆಚ್ಚಳಕ್ಕೆ ಸಹಕಾರಿಯಾಗಿದೆ.

ಏ.26 ರಂದು ಮತದಾನ ನಡೆಯುತ್ತಿದ್ದು ಇದರ ಅವಧಿಯೊಳಗೆ ಕ್ಷೇತ್ರಕ್ಕೆ ಡೆಲ್ಲಿ ಮತ್ತು ರಾಜ್ಯ ಮಟ್ಟದ ನಾಯಕರು ಬಂದು ಹೋಗುತ್ತಿದ್ದಾರೆ. ಪ್ರತಿಸ್ಪರ್ಧಿಯ ಪೈಪೋಟಿಯನ್ನು ಮೀರಿಸುವ ರೀತಿಯಲ್ಲಿ ಅಭ್ಯರ್ಥಿಗಳು ಸ್ವಪಕ್ಷೀಯ ಸ್ಟಾರ್ ಪ್ರಚಾರಕರನ್ನು ಕರೆ ತಂದು, ಪ್ರಚಾರ ನಡೆಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಎನ್‌ಡಿಎ ಅಭ್ಯರ್ಥಿಯ (ಬಿಜೆಪಿ ಮತ್ತು ಜೆಡಿಎಸ್) ನಡುವೆ ನೇರ ಹಣಾಹಣಿ ನಡೆಯುತ್ತಿದ್ದು 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಿರುಸಿನ ಪ್ರಚಾರದ ಮೂಲಕ ಗಮನ ಸೆಳೆಯುವಲ್ಲಿ ಮುಂಚೂಣಿಯಲ್ಲಿದ್ದಾರೆ.

ಎನ್‌ಡಿಎ ಅಭ್ಯರ್ಥಿ ಡಾ ಕೆ.ಸುಧಾಕರ್ ಪರ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಚಿಕ್ಕಬಳ್ಳಾಪುರದಲ್ಲಿ ಮತ ಪ್ರಚಾರ ಕೈಗೊಂಡಿದ್ದಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯ ಚುನಾವಣಾ ಉಸ್ತುವಾರಿ ಶ್ರೀ ರಾಧಾ ಮೋಹನ್ ದಾಸ್ ಅಗರ್ವಾಲ್, ನಿಕಟಪೂರ್ವ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಲವರು ಬ್ಯಾಟ್ ಬೀಸಿದ್ದಾರೆ. ಇದಕ್ಕೆ ಸ್ಥಳೀಯ ನಾಯಕರು ಪ್ರತಿನಿತ್ಯ ಅಬ್ಬರಿಸುತ್ತಿದ್ದಾರೆ.

ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸಚಿವರು, ಮಾಜಿ ಸಚಿವರು, ಸ್ಥಳೀಯ ಶಾಸಕರು ಮತ್ತು ಮಾಜಿ ಶಾಸಕರು ಸೇರಿದಂತೆ ಹಲವರು ಪ್ರಚಾರ ಕೈಗೊಳ್ಳುತ್ತಿದ್ದಾರೆ.

* ಸಿನಿ ಸ್ಟಾರ್ ಪ್ರಚಾರಕರು

ಎನ್‌ಡಿಎ ಅಭ್ಯರ್ಥಿ ಡಾ ಕೆ.ಸುಧಾಕರ್ ಉಮೇದುವಾರಿಕೆಯ ಸಂದರ್ಭದಲ್ಲಿ ನಟಿ ತಾರಾ ಹಾಜರಿದ್ದರು. ಉಳಿದಂತೆ ಕ್ಷೇತ್ರದಲ್ಲಿ ಸಿನಿ ನಟರು ಯಾರು ಪ್ರಚಾರ ಕೈಗೊಂಡಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ವರ್ಚಸ್ಸಿನ ಹಿರಿಯ ರಾಜಕಾರಣಿಗಳನ್ನು ನೆಚ್ಚಿಕೊಂಡಿವೆ. ಹಿಂದೆ ಚುನಾವಣಾ ಪ್ರಚಾರದಲ್ಲಿ ನಟರಾದ ದರ್ಶನ್, ಸುದೀಪ್, ಬ್ರಹ್ಮಾನಂದ, ದಿಗಂತ್, ಖುಷ್ಬೂ ಸೇರಿದಂತೆ ಅನೇಕ ನಟರು ಇಲ್ಲಿಗೆ ಬಂದು, ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿದ್ದರು.

* ಇತರ ಪಕ್ಷಗಳ ಸ್ಟಾರ್

ರಾಷ್ಟ್ರೀಯ ಎರಡು ಪಕ್ಷಗಳನ್ನು ಹೊರತುಪಡಿಸಿದಂತೆ ಇತರರ ಪಕ್ಷಗಳ ಪರವಾಗಿ ದೊಡ್ಡ ನಾಯಕರು ಮತ್ತು ಸ್ಟಾರ್ ಪ್ರಚಾರಕರು ಬಂದಿಲ್ಲ. ಇಲ್ಲಿ ಉತ್ತಮ ಪ್ರಜಾಕೀಯ, ಬಹುಜನ ಸಮಾಜವಾದಿ ಪಾರ್ಟಿ, ಇಂಡಿಯನ್ ಲೇಬರ್ ಪಾರ್ಟಿ, ದಿಗ್ವಿಜಯ ಪಾರ್ಟಿ, ಎಸ್‌ಯುಸಿಐ(ಸಿ), ಕರ್ನಾಟಕ ರಾಷ್ಟ್ರ ಸಮಿತಿ ಸೇರಿದಂತೆ ಇತರ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net