ಕಾಲ್ತುಳಿತ ದುರಂತವನ್ನು ವಿಧ್ವಂಸಕ ಕೃತ್ಯ ಎಂದ ಟಿವಿಕೆ; ಸಂತ್ರಸ್ತರ ಭೇಟಿಗೆ ವಿಜಯ್​ಗೆ ಅಡ್ಡಿಪಡಿಸದಂತೆ ನಿರ್ದೇಶನ ಕೋರಿ ಹೈಕೋರ್ಟ್​ಗೆ ಅರ್ಜಿ| TVK

Untitled design - 2025-09-29T142840.662
Published on

TVK: ಕರೂರಿನಲ್ಲಿ ಶನಿವಾರ(ಸೆ. 27) 41 ಜೀವಗಳನ್ನು ಬಲಿತೆಗೆದುಕೊಂಡ ಕಾಲ್ತುಳಿತ ಘಟನೆಯನ್ನು ವಿಧ್ವಂಸಕ ಕೃತ್ಯ ಎಂದು ಟಿವಿಕೆ ಕರೆದಿದೆ. ಘಟನೆಯಲ್ಲಿ ಮೃತಪಟ್ಟ ಸಂತ್ರಸ್ತ ಕುಟುಂಬಗಳನ್ನು ವಿಜಯ್ ಭೇಟಿಯಾಗಲು ಅಡ್ಡಿಪಡಿಸದಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ಕೋರಿ ಟಿವಿಕೆ ನಾಯಕ ಅಧವ್ ಅರ್ಜುನ್ ಸೋಮವಾರ(ಸೆ.29) ಮದ್ರಾಸ್​ ಹೈಕೋರ್ಟ್​ಗೆ ಪಿಐಎಲ್​ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಕಾಲ್ತುಳಿತ ಘಟನೆಯೂ ಆಡಳಿತರೂಢ ಡಿಎಂಕೆ ಪಕ್ಷದ ರಾಜಕೀಯ ಪಿತೂರಿ ಎಂದು ಆಧವ್ ಅರ್ಜುನ್ ಆರೋಪಿಸಿದ್ದು, ಕರೂರು ಸಿಟಿ ಪೊಲೀಸರು ನಡೆಸುತ್ತಿರುವ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಮುಂದುವರೆದು ಹೇಗೆ ದುರಂತ ಆಯ್ತು ಎಂದು ತಮ್ಮ ಪಕ್ಷದ ತನಿಖೆ ಭಾಗವಾಗಿ ಅರ್ಜಿಯಲ್ಲಿ ವಿವರಿಸಿರುವ ಅವರು, ವಿಜಯ್ ಭಾಷಣದ ಸಮಯದಲ್ಲಿ ಉದ್ದೇಶಪೂರ್ವಕವಾಗಿ ವಿದ್ಯುತ್ ಕಡಿತಗೊಳಿಸಲಾಯಿತು. ಇದು ಜನರಲ್ಲಿ ಭೀತಿಯನ್ನು ಸೃಷ್ಟಿಸಿತು. ಸಮಾಜವಿರೋಧಿ ದುಷ್ಕರ್ಮಿಗಳು ಜನಸಮೂಹಕ್ಕೆ ನುಸುಳಿ ಕಲ್ಲು ಮತ್ತು ಚಪ್ಪಲಿಗಳನ್ನು ಎಸೆದರು ಎಂದು ಆರೋಪಿಸಿದ್ದಾರೆ. ಖಾಲಿ ಆಂಬ್ಯುಲೆನ್ಸ್‌ಗಳನ್ನು ಸಭೆಯೊಳಗೆ ನುಗ್ಗಿಸಿ, ಪೊಲೀಸರಿಂದ ಲಾಠಿ ಚಾರ್ಜ್ ನಡೆಸಿದರು. ಆಕ್ಷೇಪಣೆಗಳ ಹೊರತಾಗಿಯೂ ಅಧಿಕಾರಿಗಳು ರ್‍ಯಾಲಿಗೆ ಕಿರಿದಾದ ಸ್ಥಳದಲ್ಲಿ ವ್ಯವಸ್ಥೆ ಮಾಡಿದರು ಎಂದು ಉಲ್ಲೇಖಿಸಿದ್ದಾರೆ.

ಘಟನೆಯನ್ನು ವಿಧ್ವಂಸಕ ಕೃತ್ಯ, ರಾಜಕೀಯ ಪಿತೂರಿ ಎಂಬ ತಮ್ಮ ಆರೋಪಕ್ಕೆ ಅರ್ಜಿಯಲ್ಲಿ ಮಾಜಿ ಸಚಿವ ಸೆಂಥಿಲ್ ಬಾಲಾಜಿ, ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಘಟನೆ ನಡೆದ ಬಳಿಕ ತಕ್ಷಣ ಕರೂರು ಆಸ್ಪತ್ರೆ ತಲುಪಿದ್ದನ್ನು ಉಲ್ಲೇಖಿಸಿದ್ದಾರೆ. ಅವರ ತಕ್ಷಣದ ಉಪಸ್ಥಿತಿ, ಜೊತೆಗೆ  ಈಗಾಗಲೇ ಇರುವ ವೈದ್ಯರು ಮತ್ತು ಸೌಲಭ್ಯಗಳ ಬಗ್ಗೆ ನೋಡಿದ್ರೆ ಘಟನೆಯನ್ನು ಡಿಎಂಕೆ ಮೊದಲೇ ಊಹಿಸಿತ್ತು. ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಸಿದ್ದವಾಗಿರುವುದನ್ನು ಸೂಚಿಸುತ್ತದೆ ಎಂದು ಆರೋಪಿಸಿದ್ದಾರೆ.

ಘಟನೆಯೂ ಆಡಳಿತರೂಢ ಪಕ್ಷದ ಬೆಂಬಲದಿಂದ ಉದ್ದೇಶಪೂರ್ವಕವಾಗಿ ನಡೆದ ವಿಧ್ವಂಸಕ ಕೃತ್ಯ. ರಾಜಕೀಯ ಒತ್ತಡದಿಂದ ರಾಜ್ಯ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದರಿಂದ ಸರಿಯಾದ ನ್ಯಾಯ ಸಿಗುವುದಿಲ್ಲ. ಸಿಬಿಐ ತನಿಖೆ ಮಾಡಿದ್ರೆ ಮಾತ್ರ ಸರಿಯಾದ ನ್ಯಾಯವನ್ನು ಒದಗಿಸುತ್ತದೆ. ಜೊತೆ ಕರೂರಿನಲ್ಲಿ ಸಂತ್ರಸ್ತ ಕುಟುಂಬಗಳನ್ನು ನಟ ವಿಜಯ್ ಭೇಟಿಯಾಗವುದನ್ನು ತಡೆಯದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net