ಕಾಲ್ತುಳಿತ ದುರಂತಕ್ಕೆ ಇವರೇ ನೇರ ಹೊಣೆ: ಡೆತ್​ನೋಟ್​​ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಟಿವಿಕೆ ಕಾರ್ಯಕರ್ತ! | Stampede

Untitled design - 2025-09-30T130420.989
Published on

Stampede: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಕಾರ್ಯಕರ್ತನೊಬ್ಬ ''ಕರೂರಿನಲ್ಲಿ ನಡೆದ ಭೀಕರ ಕಾಲ್ತುಳಿತಕ್ಕೆ ಡಿಎಂಕೆ ಸಚಿವ ಸೆಂಥಿಲ್​ ಬಾಲಾಜಿ ಮತ್ತು ಪೊಲೀಸರೇ ನೇರ ಕಾರಣ'' ಎಂದು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಟಿವಿಕೆ ಕಾರ್ಯಕರ್ತನಾಗಿದ್ದ ಮೃತರನ್ನು 51 ವರ್ಷದ ಅಯ್ಯಪ್ಪನ್ ಎಂದು ಗುರುತಿಸಲಾಗಿದೆ. ಮೂರು ದಿನಗಳಿಂದೆ ತಮ್ಮ ಪಾಲಕರನ್ನು ಭೇಟಿಯಾಗಲು ಮಾಯಿಲಂ ಗ್ರಾಮಕ್ಕೆ ಹೋಗಿದ್ದರು. ಆದರೆ, ಯಾರೂ ಇಲ್ಲದಿದ್ದಾಗ ಸೋಮವಾರ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಅಯ್ಯಪ್ಪನ್​ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಯ್ಯಪ್ಪನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮುಂಡಿಯಂಬಕ್ಕಂ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೆತ್​​ನೋಟ್​ನಲ್ಲಿ ಬರೆದಿದ್ದೇನು?

ವಿಜಯ್ ಅವರ ಪ್ರಚಾರದ ಸಮಯದಲ್ಲಿ 41 ಜೀವಗಳನ್ನು ಬಲಿ ಪಡೆದ ಕರೂರ್ ಕಾಲ್ತುಳಿತಕ್ಕೆ ಡಿಎಂಕೆ ಸಚಿವ ಸೆಂಥಿಲ್ ಬಾಲಾಜಿ ಮತ್ತು ಪೊಲೀಸರೇ ನೇರ ಹೊಣೆ ಎಂದು ಡೆತ್​ನೋಟ್​ನಲ್ಲಿ ಆರೋಪಿಸಿದ್ದಾರೆ.

"ವಿಜಯ್ ಕರೂರಿಗೆ ಬಂದಾಗ ಸೂಕ್ತ ಪೊಲೀಸ್ ರಕ್ಷಣೆ ಇರಲಿಲ್ಲ. ವಿಜಯ್ ಅಭಿಮಾನಿಗಳೇ ಪೊಲೀಸ್​ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಒಳ್ಳೆಯ ಕೆಲಸ ಮಾಡಿದರು. ಸಚಿವ ಸೆಂಥಿಲ್ ಬಾಲಾಜಿ ಅವರೇ ಈ ದುರಂತಕ್ಕೆ ಕಾರಣ. ಪೊಲೀಸರು ಕೂಡ ಭಾಗಿಯಾಗಿದ್ದಾರೆ. ಅವರನ್ನು ಶೀಘ್ರದಲ್ಲೇ ಬಂಧಿಸಿ ಜೈಲಿಗೆ ಹಾಕಬೇಕು" ಎಂದು ಕೈಬರಹದ ಪತ್ರವೊಂದು(ಡೆತ್​ನೋಟ್​) ಇದೀಗ ವೈರಲ್​ ಆಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net