

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಿಎಂ ಆಗಿ ಆಯ್ಕೆಗೊಂಡ ಬಳಿಕ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ರಾಜ್ಯದ ವಿವಿಧ ಯೋಜನೆಗಳು ಹಾಗೂ ಕೇಂದ್ರದಿಂದ ಬರಬೇಕಿರುವ ಅನುದಾನಗಳ ಬಗ್ಗೆ ಬೇಡಿಕೆ ಸಲ್ಲಿಸಿದ್ದಾರೆ.
ಕರ್ನಾಟಕ ಸರ್ಕಾರ ಉದ್ದೇಶಿತ ಮೇಕೆದಾಟು ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಇದರಿಂದ ತಮಿಳುನಾಡಿಗೆ ಅನ್ಯಾಯವಾಗಲಿದೆ ಎಂದು ವಾದಿಸಿದ್ದಾರೆ. ಹಿಂದಿನ ಎಐಎಡಿಎಂಕೆ ಸರ್ಕಾರ ಕೂಡ ಇದಕ್ಕೆ ಸಂಬಂಧಿಸಿ ಪ್ರಧಾನಿಗೆ ಹಲವು ಮನವಿಗಳನ್ನು ಈಗಾಗಲೇ ಸಲ್ಲಿಸಿದೆ. ಇದೇ ವೇಳೆ ಕಾವೇರಿ&ಗೋದಾವರಿ, ಕಾವೇರಿ&ಗುಂಡಾರ್ ಅಂತಾರಾಜ್ಯ ನದಿ ಜೋಡಣೆ ಹಾಗೂ ಕಾವೇರಿ ನದಿಯಿಂದ ತಮಿಳುನಾಡಿಗೆ ಕರ್ನಾಟಕ ಹರಿಸಬೇಕಿರುವ ನೀರಿನ ಪ್ರಮಾಣವನ್ನೂ ಖಾತರಿಪಡಿಸಬೇಕು ಎಂದೂ ಕೋರಿದ್ದಾರೆ. ತಮಿಳು ಭಾಷೆಯನ್ನು ದೇಶದ ಅಧಿಕೃತ ಭಾಷೆಯಾಗಿ ಗುರುತಿಸಬೇಕು ಎಂಬ ಬೇಡಿಕೆಯೂ ಮನವಿಯಲ್ಲಿದೆ.