

ಬೆಂಗಳೂರು: ಲಲಿತ್ ಅಶೋಕ್ ಹೋಟೆಲ್ನಲ್ಲಿ ತಡರಾತ್ರಿ ಪಾರ್ಟಿ ವೇಳೆ ನಡೆದ ಗಲಾಟೆಯಲ್ಲಿ ಇಬ್ಬರು ದುಷ್ಕರ್ವಿುಗಳು ಯುವಕನಿಗೆ ಚೂರಿಯಿಂದ ಹಲ್ಲೆ ನಡೆಸಿದ್ದಾರೆ.
ಜೆ.ಪಿ. ನಗರದ ನಿವಾಸಿ ಸಂಕಲ್ಪ್ (19) ಹಲ್ಲೆಗೊಳಗಾದ ಯುವಕ. ಈ ಕುರಿತು ಆತನ ಸ್ನೇಹಿತ ಭಾರ್ಗವ ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ ಹಲ್ಲೆ ನಡೆಸಿದ ಇಬ್ಬರು ಅಪರಿಚಿತ ದುಷ್ಕರ್ವಿುಗಳು ಹಾಗೂ ಹೋಟೆಲ್ ಮ್ಯಾನೇಜರ್, ಕಾರ್ಯಕ್ರಮ ಆಯೋಜಕ, ಬೌನ್ಸರ್ ಹಾಗೂ ಭದ್ರತಾ ವ್ಯವಸ್ಥಾಪಕ ಸೇರಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೈಗ್ರೌಂಡ್ಸ್ ಪೊಲೀಸರು ತಿಳಿಸಿದ್ದಾರೆ.
ಥಳಿಸಿ ಹೊರಹಾಕಿದ ಬೌನ್ಸರ್ಸ್!: ಶನಿವಾರ (ಜ.26) ರಾತ್ರಿ 10.20ರಲ್ಲಿ ಭಾರ್ಗವ್ ಮತ್ತು ಆತನ ಸ್ನೇಹಿತರಾದ ಸಂಕಲ್ಪ್, ಧೀರಜ್, ಸಾಹೀ ರೋಹಿತ್ ಲಲಿತ್ ಅಶೋಕ್ ಹೋಟೆಲ್ನಲ್ಲಿ ಪಾರ್ಟಿಗೆ ಹೋಗಿದ್ದರು. ರಾತ್ರಿ ಅಲ್ಲಿಯೇ ಊಟ ಮುಗಿಸಿ ಡಿಜೆ ಮ್ಯೂಸಿಕ್ ನೃತ್ಯದಲ್ಲಿ ಪಾಲ್ಗೊಂಡಿದ್ದರು. ಅದೇ ವೇಳೆ ಯುವಕರ ಮತ್ತೊಂದು ಗುಂಪು ಕುಡಿದ ಮತ್ತಿನಲ್ಲಿ ಭಾರ್ಗವ್ ಮತ್ತು ಆತನ ಸ್ನೇಹಿತರ ಜತೆ ಗಲಾಟೆ ತೆಗೆದಿತ್ತು. ಈ ವಿಚಾರವನ್ನು ಬೌನ್ಸರ್ ಗಮನಕ್ಕೆ ತಂದಿದ್ದರು. ಆದರೆ, ಕಿಡಿಗೇಡಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾದ ಬೌನ್ಸರ್ಗಳು, ದೂರು ಕೊಟ್ಟ ಭಾರ್ಗವ್ನನ್ನು ಥಳಿಸಿ ಸ್ನೇಹಿತರ ಜತೆ ಪಾರ್ಟಿಯಿಂದ ಹೊರಹಾಕಿದ್ದಾರೆ. ಬಳಿಕ ಹೋಟೆಲ್ ಮ್ಯಾನೇಜರ್ನನ್ನು ಕರೆಸಿ, ನಡೆದ ವಿಚಾರವನ್ನು ತಿಳಿಸಿದ್ದಾರೆ. ‘ನಮ್ಮದು ತಪ್ಪಿಲ್ಲದಿದ್ದರೂ ಬೌನ್ಸರ್ ಎಲ್ಲರ ಮುಂದೆ ಥಳಿಸಿ ಹೊರಹಾಕಿದ್ದಾನೆ. ಆತನನ್ನು ಕರೆಸಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.
ಕಾರಿನಲ್ಲಿದ್ದ ಚಾಕುವಿನಿಂದ ಹಲ್ಲೆ: ಪಾರ್ಟಿ ಮುಗಿಸಿ ಎಲ್ಲರೂ ಹೋಟೆಲ್ನಿಂದ ಹೊರಬಂದಿದ್ದು, ಮ್ಯಾನೇಜರ್ ಜತೆ ಮಾತನಾಡುತ್ತ ನಿಂತಿದ್ದ ಭಾರ್ಗವ್ ಮತ್ತು ಆತನ ಸ್ನೇಹಿತರ ಜತೆ ಇಬ್ಬರು ಅಪರಿಚಿತ ಯುವಕರು ಮತ್ತೆ ಗಲಾಟೆ ತೆಗೆದಿದ್ದಾರೆ. ಓರ್ವ ಯುವಕ ತನ್ನ ಕಾರಿನಲ್ಲಿಟ್ಟಿದ್ದ ಚೂರಿಯನ್ನು ತಂದು ಸಂಕಲ್ಪ ಮೇಲೆ ಹಲ್ಲೆ ನಡೆಸಿದ್ದಾನೆ. ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜಗಳ ಬಿಡಿಸದ ಭದ್ರತಾ ಸಿಬ್ಬಂದಿ
ಮಾರಾಮಾರಿ ನಡೆಯುತ್ತಿದ್ದಾಗ ಅಲ್ಲಿಯೇ ನಿಂತಿದ್ದ ಭದ್ರತಾ ಸಿಬ್ಬಂದಿ ತಡೆಯಲು ಮುಂದಾಗಲಿಲ್ಲ. ಹಲ್ಲೆ ಮಾಡುತ್ತಿರುವುದನ್ನು ಕಣ್ಣಾರೆ ನೋಡುತ್ತ ನಿಂತಿದ್ದರು. ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಗಲಾಟೆ ತಡೆದಿದ್ದರೆ ದುಷ್ಕರ್ವಿುಗಳು ಚೂರಿಯಿಂದ ಹಲ್ಲೆ ನಡೆಸುತ್ತಿರಲಿಲ್ಲ. ಅಲ್ಲದೆ, ಗಾಯಗೊಂಡು ಬಿದ್ದಿದ್ದ ಸಂಕಲ್ಪ್ನನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಲಿಲ್ಲ. ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಗೆ ಭದ್ರತಾ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಭಾರ್ಗವ್ ಆರೋಪಿಸಿದ್ದಾರೆ. ಹಾಗಾಗಿ ಹೋಟೆಲ್ ಮ್ಯಾನೇಜರ್, ಪಾರ್ಟಿ ಆಯೋಜಕ, ಭದ್ರತಾ ವಿಭಾಗದ ಮ್ಯಾನೇಜರ್ ಹಾಗೂ ಥಳಿಸಿದ ಬೌನ್ಸರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ಹಲ್ಲೆ ಮಾಡಿದ ದುಷ್ಕರ್ವಿುಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.