ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಬದಲಾವಣೆ: ಏನು..? ಹೇಗೆ..?

examoi
Published on

ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸರ್ಕಾರ ಹೊಸ ಬದಲಾವಣೆ ತಂದಿದೆ!

ಪೂರಕ ಪರೀಕ್ಷೆ ಎಂಬ ಪರಿಕಲ್ಪನೆ ತೆಗೆದುಹಾಕಿದೆ. ವರ್ಷಕ್ಕೆ ಒಂದು ವಾರ್ಷಿಕ ಮತ್ತು ಪೂರಕ ಪರೀಕ್ಷೆಯ ಬದಲಾಗಿ ವರ್ಷಕ್ಕೆ ಮೂರು ವಾರ್ಷಿಕ ಪರೀಕ್ಷೆ 1, 2 ಮತ್ತು 3 ಎಂದು ಹೆಸರಿಸುವುದರೊಂದಿಗೆ ಮೂರು ಅವಕಾಶ ಒದಗಿಸುವ ಹೊಸ ವ್ಯವಸ್ಥೆ ರೂಪಿಸಿದೆ. ಇದು 2023-24ನೇ ಸಾಲಿನಿಂದಲೇ ಜಾರಿಗೆ ಬರಲಿದೆ.

ಹಾಲಿ ಒಂದು ವಾರ್ಷಿಕ ಪರೀಕ್ಷೆ ಹಾಗೂ ಒಂದು ಪೂರಕ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷಾ ಪದ್ಧತಿ ವಿದ್ಯಾರ್ಥಿಗಳ ಮೇಲೆ ಒತ್ತಡ ಉಂಟು ಮಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳ ಜ್ಞಾನಧಾರಣೆ, ಅರ್ಥಪೂರ್ಣ ಕಲಿಕೆ, ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ.

ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಯು ಗಳಿಸಿದ ಅಂಕಗಳಿಂದ ತೃಪ್ತರಾಗದಿದ್ದರೆ ವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ತಿರಸ್ಕರಿಸಲು ಅವಕಾಶವಿದೆ.

ಹಿಂದಿನ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸದೇ ಪೂರಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಮಾತ್ರ ವಿದ್ಯಾರ್ಥಿಯ ಅಂತಿಮ ಅಂಕಗಳೆಂದು ಪರಿಗಣಿಸಲಾಗುತ್ತದೆ. ಈ ವ್ಯವಸ್ಥೆ ವಿದ್ಯಾರ್ಥಿ ಸ್ನೇಹಿಯಾಗಿಲ್ಲ. ಹಾಗಾಗಿ ಎರಡು ಪರೀಕ್ಷೆಗಳಲ್ಲಿ ತನ್ನ ಅತ್ಯುತ್ತಮ ಅಂಕವನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗೆ ಯಾವುದೇ ಆಯ್ಕೆ ಇಲ್ಲ. ಹೊಸ ಪದ್ಧತಿಯಲ್ಲಿ 1,2 ಮತ್ತು 3 ಪರೀಕ್ಷೆಗಳಲ್ಲಿ ಗಳಿಸಿದ ವಿಷಯವಾರು ಅಂಕಗಳನ್ನು ಉಳಿಸಿಕೊಳ್ಳಲು ಅವಕಾಶ ದೊರೆಯಲಿದೆ. ಇದರಿಂದ ಮುಂದಿನ ವ್ಯಾಸಂಗಕ್ಕೆ ಅಥವಾ ಉದ್ಯೋಗಕ್ಕೆ ಆಯ್ಕೆ ಪ್ರಕ್ರಿಯೆಗಳಲ್ಲಿ ಉತ್ತಮ ಅವಕಾಶ ಒದಗಲಿದೆ.

ಎರಡನೆಯದಾಗಿ, ವಿದ್ಯಾರ್ಥಿಗಳ ಕಲಿಕೆಯ ವೇಗ ಮತ್ತು ಶೈಲಿಯು ವಿಭಿನ್ನವಾಗಿದ್ದು, 1,2 ಮತ್ತು 3 ಪರೀಕ್ಷೆಗಳನ್ನು ನಡೆಸುವುದರಿಂದ ಅವರ ಕಲಿಕೆಯ ವೇಗಕ್ಕೆ ಹೊಂದಿಕೊಳ್ಳಲು ಮತ್ತು ಸಮಯದ ನಿರ್ಬಂಧಗಳಿಂದ ಉಂಟಾಗುವ ಒತ್ತಡ ಕಡಿಮೆ ಮಾಡಲು ಸಹಾಯವಾಗಲಿದೆ.

ಮೂರನೆಯದಾಗಿ, ಪೂರಕ ಪರೀಕ್ಷೆ ಎಂಬ ಹೆಸರಿನ ಬದಲಿಗೆ ವಾರ್ಷಿಕ ಪರೀಕ್ಷೆ 1,2 ಮತ್ತು 3 ಎಂದು ಹೆಸರಿಸುವುದರೊಂದಿಗೆ ಮೂರು ಅವಕಾಶಗಳನ್ನು ಒದಗಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಯ ಒಟ್ಟಾರೆ ಕಾರ್ಯಕ್ಷಮತೆ ಉತ್ತೇಜಿಸಿದಂತಾಗುತ್ತದೆ.

ಈ ಪದ್ಧತಿಯಲ್ಲಿ ವಿದ್ಯಾರ್ಥಿಗಳು ಮೂರು ಪರೀಕ್ಷೆಯಲ್ಲಿ ತೆಗೆದ ಉತ್ತಮ ಅಂಕವನ್ನು ಮಾತ್ರ ಅಂಕಪಟ್ಟಿಗೆ ಪರಿಗಣಿಸಲಿದೆ. ಇದರಿಂದ ಮೊದಲಿನಂತೆ ವಿದ್ಯಾರ್ಥಿಗಳು ಒಂದು ವಾರ್ಷಿಕ ಪರೀಕ್ಷೆ ಆನಂತರ ಪೂರಕ ಪರೀಕ್ಷೆ ಬರೆದು ಮತ್ತೊಂದು ಪರೀಕ್ಷೆಗಾಗಿ ಕಾಯುವ ಅವಶ್ಯಕತೆ ಇರುವುದಿಲ್ಲ.

ಮೂರು ಪರೀಕ್ಷೆ ಎಂದ ಮಾತ್ರಕ್ಕೆ ವಿದ್ಯಾರ್ಥಿಗಳು ತಮ್ಮಿಷ್ಟದ ಪ್ರಕಾರ ಯಾವುದಾದರೊಂದು ಪರೀಕ್ಷೆ ಆಯ್ಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಮೊದಲ ವಾರ್ಷಿಕ ಪರೀಕ್ಷೆಯನ್ನು ಹೊಸಬರು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಆದರೆ ಪುನರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿಗಳು ಮಾತ್ರ ಈ ಮೂರು ಪರೀಕ್ಷೆಯನ್ನು ತಮ್ಮ ಇಚ್ಛಾನುಸಾರ ತೆಗೆದುಕೊಳ್ಳುವುದಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅವಕಾಶ ಕಲ್ಪಿಸಿದೆ.

ಏನು ಪ್ರಯೋಜನ?

ಸಾಮಾನ್ಯವಾಗಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹಾಜರಾಗುತ್ತಿದ್ದರು. ಈ ಪೂರಕ ಪರೀಕ್ಷೆಯಲ್ಲೂ ಅನುತ್ತೀರ್ಣರಾದವರು ಮುಂದಿನ ವಾರ್ಷಿಕ ಪರೀಕ್ಷೆಗಾಗಿ ಕಾಯಬೇಕಾಗಿತ್ತು. ಈ ಅವಧಿ ಮಧ್ಯೆ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳದೇ ಶಿಕ್ಷಣದಿಂದ ದೂರು ಉಳಿಯುತ್ತಿದ್ದರು. ಇದನ್ನು ಹೋಗಲಾಡಿಸುವ ಸಲುವಾಗಿಯೇ ದ್ವಿತೀಯ ಪಿಯುಗೆ 2ನೇ ಪೂರಕ ಪರೀಕ್ಷೆಯನ್ನು ಪರಿಚಯಿಸಿತ್ತು. ೇಲ್ ಆದ ಅಭ್ಯರ್ಥಿಗಳು ಪೂರಕ ಪರೀಕ್ಷೆಯಲ್ಲಿ ಪಾಸ್ ಆದಲ್ಲಿ, ಅಂಕಪಟ್ಟಿಯ ಮೇಲೆ ಪೂರಕ ಪರೀಕ್ಷೆ ಎಂದು ನಮೂದಾಗುತ್ತಿದ್ದರಿಂದ ಇದು ವಿದ್ಯಾರ್ಥಿಗಳಿಗೆ ಮುಜುಗರ ತರುತ್ತಿತ್ತು. ಈ ಮುಜುಗರ ಹೋಗಲಾಡಿಸುವುದು ಮತ್ತು ಶಿಕ್ಷಣ ವಂಚಿತರಾಗುವುದನ್ನು ತಪ್ಪಿಸುವ ಉದ್ದೇಶ ಇಟ್ಟುಕೊಂಡು ಮಂಡಳಿಯು ಮೂರು ವಾರ್ಷಿಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಸಂಭವನೀಯ ವೇಳಾಪಟ್ಟಿ

10ನೇ ತರಗತಿ ಪರೀಕ್ಷೆ

ಪರೀಕ್ಷೆ 1- ಮಾರ್ಚ್ 30 ರಿಂದ ಏಪ್ರಿಲ್ 15

ಪರೀಕ್ಷೆ 2-ಜೂನ್ 12 ರಿಂದ ಜೂನ್ 19

ಪರೀಕ್ಷೆ 3-ಜುಲೈ 29 ರಿಂದ ಆಗಸ್ಟ್ 5

ದ್ವಿತೀಯ ಪಿಯುಸಿ ಪರೀಕ್ಷೆ

ಪರೀಕ್ಷೆ 1-ಮಾರ್ಚ್ 1 ರಿಂದ ಮಾರ್ಚ್ 25

ಪರೀಕ್ಷೆ 2-ಮೇ 15 ರಿಂದ ಜೂನ್ 5

ಪರೀಕ್ಷೆ 3- ಜುಲೈ 12 ರಿಂದ ಜುಲೈ 30

ಅಂಕ ಪರಿಗಣನೆ ಹೇಗೆ

ಮೊದಲ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಯು ಗಳಿಸಿದ ಅಂಕಗಳಿಂದ ತೃಪ್ತರಾಗದಿದ್ದರೆ, ಅದನ್ನು ತಿರಸ್ಕರಿಸಿ 2ನೇ ವಾರ್ಷಿಕ ಪರೀಕ್ಷೆ ಬರೆಯಲು ಅವಕಾಶ ಇದೆ. ಅಲ್ಲಿ ಕೂಡ ಇಷ್ಟವಾಗದೇ ಇದ್ದರೆ 3ನೇ ವಾರ್ಷಿಕ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಇದರಲ್ಲಿ ಉತ್ತಮವಾದ ಅಂಕಗಳನ್ನು ಮಾತ್ರ ವಿದ್ಯಾರ್ಥಿಯ ಅಂತಿಮ ಅಂಕವೆಂದು ಪರಿಗಣಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net