

ಹೈದರಾಬಾದ್: ಕರೊನಾ ಸಮಯದಲ್ಲಿ ಆನ್ಲೈನ್ ಕ್ಲಾಸ್ಗಳು ಹೆಚ್ಚಾಗಿ ನಡೆಯುತ್ತಿದ್ದು, ಸದಾ ಮೊಬೈಲ್ನಲ್ಲಿ ಬಿಜಿಯಾಗಿರುವ ಮಕ್ಕಳ ಮೇಲೆ ಪಾಲಕರು ಎಚ್ಚರಿಕೆ ವಹಿಸದಿದ್ದಾರೆ ಏನಾಗಬಹುದು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಈಗಾಗಲೇ ಬಂದಿವೆ. ತಾಜಾ ಸೇರ್ಪಡೆ ಎಂಬಂತೆ 16 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಕ್ಲಾಸ್ಮೇಟ್ ಒಬ್ಬಳ ಫೋಟೋವನ್ನು ಕೆಟ್ಟದಾಗಿ ಎಡಿಟ್ ಮಾಡಿ ಆಕೆಯನ್ನು ಬೆದರಿಸಿರುವ ಘಟನೆ ಹೈದರಾಬಾದ್ನಲ್ಲಿ ವರದಿಯಾಗಿದೆ.
ರಾಚಕೊಂಡ ಸೈಬರ್ ಕ್ರೈಂ ಪೊಲೀಸರ ಪ್ರಕಾರ ಮೇಡ್ಚಲ್ ಮಲ್ಕಜ್ಗಿರಿ ಜಿಲ್ಲೆಯ ಮುಡ್ಚಿಂಟಲಪಲ್ಲಿ ಮಂಡಲದ ನಿವಾಸಿಯಾದ 16 ವರ್ಷದ ವಿದ್ಯಾರ್ಥಿ, 10ನೇ ತರಗತಿ ವಿದ್ಯಾರ್ಥಿಗಳ ವಾಟ್ಸ್ಆ್ಯಪ್ ಗ್ರೂಪ್ನ ಸದಸ್ಯನಾಗಿದ್ದಾನೆ. ತನ್ನ ಕ್ಲಾಸ್ಮೇಟ್ ಫೋಟೋವನ್ನು ಗ್ರೂಪ್ನಲ್ಲಿ ನೋಡಿದ್ದಾನೆ. ಬಳಿಕ ಆಕೆಗೆ ಸಂದೇಶವನ್ನು ಸಹ ಕಳುಹಿಸಿದ್ದಾನೆ. ಆದರೆ, ಆಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡದಿದ್ದಾಗ ಆಕೆಯ ಹೆಸರು ಕೆಡಿಸುವ ಕೆಲಸಕ್ಕೆ ಮುಂದಾಗಿದ್ದಾನೆ.
ಬಳಿಕ ಆಕೆಯ ಪ್ರೊಫೈಲ್ ಫೋಟೋವನ್ನು ತೆಗೆದುಕೊಂಡು ಫೋಟೋ ಎಡಿಟ್ ಮಾಡುವ ಆ್ಯಪ್ಗಳ ಮೂಲಕ ಆಕೆಯ ಫೋಟೋಗಳನ್ನು ಕೆಟ್ಟದಾಗಿ ಎಡಿಟ್ ಮಾಡಿದ್ದಾನೆ. ಬಳಿಕ ನಕಲಿ ನಂಬರ್ನಿಂದ ಆಕೆಯ ವಾಟ್ಸ್ಆ್ಯಪ್ಗೆ ಫೋಟೋಗಳನ್ನು ಕಳುಹಿಸಿದ್ದಾನೆ. ಬಳಿಕ ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ ಒತ್ತಾಹಿಸಿದ್ದಾನೆ. ಇಲ್ಲದಿದ್ದರೆ ಬೆತ್ತಲೆ ಫೋಟೋಗಳನ್ನು ಗ್ರೂಪ್ನಲ್ಲಿ ಶೇರ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಆದರೆ, ಸಂತ್ರಸ್ತೆ ಇದ್ಯಾವುದಕ್ಕೂ ಪ್ರತಿಕ್ರಿಯಿಸದೇ ಪೊಲೀಸರಿಗೆ ದೂರು ನೀಡಿದ್ದಾಳೆ. ಬಳಿಕ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಸೆರೆಹಿಡಿದು ಪೊಕ್ಸೊ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. ಆತ ತನ್ನ ಅಂಕಲ್ ಮೊಬೈಲ್ ಫೋನ್ನಿಂದ ಗೂಗಲ್ ಡ್ಯಾಶ್ಬೋರ್ಡ್ ಸಹಾಯದಿಂದ ತನ್ನ ಮಾಹಿತಿಗಳನೆಲ್ಲ ಅಳಿಸಿ ಹಾಕಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ವಿಚಾರಣೆ ಮುಂದುವರಿದಿದೆ. (ಏಜೆನ್ಸೀಸ್)