

ಬೆಂಗಳೂರು: 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇಖಡವಾರು 71.80 ಫಲಿತಾಂಶ ಬಂದಿದೆ. 625ಕ್ಕೆ 625 ಅಂಕ ಪಡೆದ 6 ಮಕ್ಕಳು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ದ್ವೀತಿಯ ರ್ಯಾಂಕ್ ಅನ್ನು 11 ವಿದ್ಯಾಥಿರ್ಗಳು ಹಂಚಿಕೊಂಡಿದ್ದಾರೆ. ಬಾಲಕರು ಶೇ.66.41 ಮತ್ತು ಬಾಲಕಿಯರು ಶೇ.77.74 ಅಂಕ ಗಳಿಸುವ ಮೂಲಕ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ ಶ್ರೇಣೀಕೃತ ರ್ಯಾಂಕಿಂಗ್ ನೀಡಿದ್ದು, ಚಿಕ್ಕಬಳ್ಳಾಪುರ ಮೊದಲ ಸ್ಥಾನ, ಯಾದಗಿರಿ ಕೊನೇ ಸ್ಥಾನ ಪಡೆದುಕೊಂಡಿದೆ.
ವಿದ್ಯಾರ್ಥಿಗಳ ಮೊಬೈಲ್ಗೆ ಎಸ್ಎಂಎಸ್ ಮೂಲಕ ಫಲಿತಾಂಶ ಕಳುಹಿಸಲಾಗಿದ್ದು, ನಾಳೆ(ಮಂಗಳವಾರ) ಶಾಲೆಗಳಲ್ಲಿ ಪ್ರಕಟವಾಗಲಿದೆ. www.karresult.nic.in ವೆಬ್ಸೈಟ್ನಲ್ಲೂ ಫಲಿತಾಂಶ ಪ್ರಕಟವಾಗಿದ್ದು, ಮಕ್ಕಳು ಮನೆಯಲ್ಲೇ ಕುಳಿತು ನೋಡಿಕೊಳ್ಳಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕರೊನಾ ಆತಂಕದ ನಡುವೆಯೂ ಪರೀಕ್ಷೆಗೆ ಹಾಜರಾಗಿದ್ದ 8,11,050 ವಿದ್ಯಾರ್ಥಿಗಳ ಪೈಕಿ 5,82, 360 ಮಂದಿ ಉತ್ತೀರ್ಣರಾಗಿದ್ದಾರೆ. 2,28,734 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. 625ಕ್ಕೆ 625 ಅಂಕ ಪಡೆದ 6 ಮಕ್ಕಳು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಕಳೆದಬಾರಿ ನಾಲ್ವರು ಮಾತ್ರ 625ಕ್ಕೆ 625 ಅಂಕ ಪಡೆದಿದ್ದರು. ಕಳೆದ ವರ್ಷ ಶೇ. 73.70 ಫಲಿತಾಂಶ ಬಂದಿತ್ತು. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಈ ವರ್ಷ ಶೇ. 1.9 ರಷ್ಟು ಕಡಿಮೆ ಫಲಿತಾಂಶ ಬಂದಿದೆ.
ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 8,48,203 ವಿದ್ಯಾರ್ಥಿಗಳ ಪೈಕಿ 19,086 ಮಂದಿಗೆ ಶೇ.75 ಕನಿಷ್ಠ ಹಾಜರಾತಿ ಇರಲಿಲ್ಲವೆಂದು ಪರೀಕ್ಷೆಗೆ ಅವಕಾಶ ನೀಡಿರಲಿಲ್ಲ. ಮಾರ್ಚ್ನಲ್ಲೇ ಆರಂಭವಾಗಬೇಕಿದ್ದ ಪರೀಕ್ಷೆಯನ್ನು ಕರೊನಾ ಲಾಕ್ಡೌನ್ ಪರಿಣಾಮ ಮುಂದೂಡಲಾಗಿತ್ತು. ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡು ಜೂ.25ರಿಂದ ಜು.5ರವರೆಗೆ ಪರೀಕ್ಷೆಯನ್ನು ನಡೆಸಲಾಗಿತ್ತು. ಅಲ್ಲದೆ ಮೌಲ್ಯಮಾಪವನ್ನು ವಿಕೇಂದ್ರೀಕರಣ ಮಾಡಿ 34 ಶೈಕ್ಷಣಿಕ ಜಿಲ್ಲೆಯ 227 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಸಲಾಗಿತ್ತು.