ಎರಡೆರಡು ಬಾರಿ ಬರೆಯಿರಿ ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯು ಪರೀಕ್ಷೆ; ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ ಅವಕಾಶ

300720 Raichur CET Exam
ರಾಯಚೂರಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು.
Published on

ನವದೆಹಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರಲಿದೆ. 34 ವರ್ಷಗಳ ಬಳಿಕ ಜಾರಿಗೊಳಿಸಲಾಗುತ್ತಿರುವ ಶಿಕ್ಷಣ ನೀತಿಯ ಪರಿಷ್ಕರಣೆ ಹಲವು ಕಾರಣಗಳಿಂದಾಗಿ ಮಹತ್ವ ಪಡೆದಿದೆ.

ನೂತನ ಶಿಕ್ಷಣ ನೀತಿಯಲ್ಲಿ ಪರೀಕ್ಷೆಗಳಿಗೆ ನೀಡಲಾಗಿರುವ ಪ್ರಾಧಾನ್ಯತೆಯನ್ನು ಕಡಿಮೆ ಮಾಡಲಾಗಿದೆ. ಸಮಗ್ರ ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಒತ್ತು ನೀಡಲಾಗಿದೆ. ಈ ಕಾರಣಕ್ಕೆ ಬೋರ್ಡ್​ ಅಥವಾ ಮಂಡಳಿ ಪರೀಕ್ಷೆಗಳನ್ನು ಪಾಸ್​ ಮಾಡಲು ವಿದ್ಯಾರ್ಥಿಗಳಿಗೆ ವರ್ಷಕ್ಕೆರಡು ಅವಕಾಶ ಸಿಗಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಖ್ರಿಯಾಲ್​ ತಿಳಿಸಿದ್ದಾರೆ.

10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ಸುಲಭವಾಗಿಸಲಾಗಿದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಎರಡು ಬಾರಿ ಹಾಜರಾಗಬಹುದು. ಕಳೆದ ಬಾರಿಯ ಕರಡು ನೀತಿಯಲ್ಲೂ ಈ ಅಂಶವನ್ನು ಉಲ್ಲೇಖಿಸಲಾಗಿತ್ತು. ಅಂತಿಮ ನೀತಿಯಲ್ಲೂ ಇದನ್ನು ಉಳಿಸಿಕೊಳ್ಳಲಾಗಿದೆ.

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸ್ಪರ್ಧಾತ್ಮಕತೆಯನ್ನು ಓರೆಗೆ ಹಚ್ಚಲಾಗುತ್ತದೆಯೇ ಹೊರತು, ಅವರ ಸ್ಮರಣ ಶಕ್ತಿಯನ್ನಲ್ಲ. ಏಕೆಂದರೆ, ವಿದ್ಯಾರ್ಥಿಗಳು ಕೋಚಿಂಗ್​ ಸೆಂಟರ್​ನಲ್ಲಿ ಕಲಿತದ್ದನ್ನು ಅಥವಾ ಊರು ಹೊಡೆದಿದ್ದನ್ನು ಅವಲಂಬಿಸದೆ ನೈಜ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಶೈಕ್ಷಣಿಕ ವರ್ಷದ ಯಾವುದೇ ಸಮಯದಲ್ಲಿ ಎಲ್ಲ ವಿದ್ಯಾರ್ಥಿಗಳು ಎರಡು ಬಾರಿ ಪರೀಕ್ಷೆಗೆ ಹಾಜರಾಗಬಹುದು. ಒಂದು ಮುಖ್ಯ ಪರೀಕ್ಷೆ ಹಾಗೂ ಇನ್ನೊಂದು ಅದನ್ನು ಉತ್ತಮಪಡಿಸಿಕೊಳ್ಳುವ ಅವಕಾಶವಾಗಿರಲಿದೆ. ಇದು ವಾರ್ಷಿಕ ಪರೀಕ್ಷೆಯ ಭೀತಿಯನ್ನು ಹೋಗಲಾಡಿಸಲಿದೆ.

ಮುಂದಿನ ದಿನಗಳಲ್ಲಿ ಸೆಮಿಸ್ಟರ್​ ಮಾದರಿಯಲ್ಲಿ ಬೋರ್ಡ್​ ಪರೀಕ್ಷೆ, ಸಬ್ಜೆಕ್ಟಿವ್​ ಹಾಗೂ ಆಬ್ಜೆಕ್ಟಿವ್​ ಪ್ರಶ್ನೆಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸುವ ಉದ್ದೇಶವನ್ನು ಹೊಂದಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net