

ನವದೆಹಲಿ: ಕೇಂದ್ರ ಸಚಿವ ಸಂಪುಟವು ನೂತನ 'ರಾಷ್ಟ್ರೀಯ ಶಿಕ್ಷಣ ನೀತಿ'ಗೆ ಬುಧವಾರ ಅನುಮೋದನೆ ನೀಡಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಈ ವಿಷಯ ತಿಳಿಸಿದ್ದಾರೆ.
ವಿದೇಶಿ ವಿಶ್ವ ವಿದ್ಯಾಲಯಗಳ ಕ್ಯಾಂಪಸ್ ಸ್ಥಾಪನೆಗೆ ಅವಕಾಶ, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಏಕ ನಿಯಂತ್ರಣ ವ್ಯವಸ್ಥೆ, ಪದವಿ ತರಗತಿಗಳಿಗೆ ಬಹುಹಂತದ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ, ಎಂಫಿಲ್ ರದ್ದು, ದೇಶವ್ಯಾಪಿ ವಿವಿ ಕೋರ್ಸ್ಗಳ ಪ್ರವೇಶಕ್ಕೆ ಒಂದೇ ಪ್ರವೇಶ ಪರೀಕ್ಷೆ ಮೊದಲಾದವುಗಳು ಶಿಕ್ಷಣ ನೀತಿಯ ಪ್ರಮುಖ ವಿಶೇಷತೆಗಳಾಗಿವೆ
ಪದವಿ ಶಿಕ್ಷಣ ಸ್ವರೂಪದಲ್ಲಿ ಬದಲಾವಣೆ: ಮೂರು ವರ್ಷಗಳ ಕೋರ್ಸ್ ಮುಂದುವರಿಯಲಿದ್ದು, ನಾಲ್ಕು ವರ್ಷಗಳ ಬಹುಶಾಸ್ತ್ರೀಯ ಪದವಿ ಶಿಕ್ಷಣವನ್ನು ಮತ್ತೆ ಜಾರಿಗೊಳಿಸಲಾಗುತ್ತದೆ. ಇದರಲ್ಲಿ ಬಹುಹಂತದ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶವಿರಲಿದೆ. ಮೊದಲ ವರ್ಷದ ಬಳಿಕ ತೊರೆದರೆ ಸರ್ಟಿಫಿಕೇಟ್ ಸಿಗಲಿದೆ. ಎರಡನೇ ವರ್ಷದಲ್ಲಿ ಡಿಪ್ಲೊಮಾ ಪಡೆಯಲಿದ್ದರೆ, ಮೂರು ವರ್ಷದ ಬಳಿಕ ಪದವಿ ಗಳಿಸಲಿದ್ದಾರೆ.
ನಾಲ್ಕು ವರ್ಷದ ಕೋರ್ಸ್ನಲ್ಲಿ ಸಂಶೋಧನೆ ಜತೆಗೆ ಪದವಿ ದೊರೆಯಲಿದೆ. ವಿದ್ಯಾರ್ಥಿಯು ಪ್ರಮುಖ ವಿಷಯದಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಳ್ಳಬಹುದು ಎಂದು ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲಾಗಿದೆ.
ಯುಜಿಸಿ ರದ್ದು: ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳ ನಿಯಂತ್ರಣಕ್ಕೆ ಒಂದೇ ಸಂಸ್ಥೆ ರಚನೆಯಾಗಲಿದೆ. ಯುಜಿಸಿ, ತಾಂತ್ರಿಕ ಶಿಕ್ಷಣ ಮಂಡಳಿ, ಉನ್ನತ ಶಿಕ್ಷಣ ಮಂಡಳಿ ಮೊದಲಾದವುಗಳು ಸ್ಥಾನ ಕಳೆದುಕೊಳ್ಳಲಿವೆ.
ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಾ ವಿಷಯಗಳನ್ನು ಕಲಿಯಬಹುದು. ಕಲಾ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಕೂಡ ಬೋಧಿಸಬಹುದು. ಐಐಟಿ ಮೊದಲಾದ ಸಂಸ್ಥೆಗಳಲ್ಲಿ ಮಾನವಿಕ ವಿಷಯಗಳನ್ನೂ ಬೋಧಿಸಲಾಗುತ್ತದೆ. ವಿವಿಗಳಲ್ಲೂ ಬಹುಶಾಸ್ತ್ರೀಯ ಅಧ್ಯಯನಕ್ಕೆ ಅವಕಾಶವಿರಲಿದೆ. ಒಂದೇ ವಿಷಯ ಅಥವಾ ವಿಭಾಗದಲ್ಲಿ ಶಿಕ್ಷಣ ನೀಡುವ ಸಂಸ್ಥೆಗಳನ್ನು ಹಂತಹಂತವಾಗಿ ಬದಲಾಯಿಸಲಾಗುತ್ತದೆ. ಅಂತಿಮ ಸೆಮಿಸ್ಟರ್ ಅಥವಾ ವಾರ್ಷಿಕ ಪರೀಕ್ಷೆ ಬದಲು ನಿರಂತರ ಮೌಲ್ಯಮಾಪನ ಪದ್ಧತಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಆದ್ಯತೆ ನೀಡಿದೆ.