

ದೇಶದಲ್ಲಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಕರೊನಾ ಸಂಕಷ್ಟಮಯ ವಾತಾವರಣ ಉಂಟು ಮಾಡಿದೆ. ಕೆಲ ದೇಶಗಳಲ್ಲಿ ಕರೊನಾ ನಿಯಂತ್ರಣಕ್ಕೆ ಬಂದಿದ್ದರೂ, ಭಾರತ ಸೇರಿ ಹಲವು ದೊಡ್ಡ ರಾಷ್ಟ್ರಗಳಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಅಮೆರಿಕದಲ್ಲಿ ಅತಿ ಹೆಚ್ಚು ಕರೊನಾ ಸೋಂಕಿತರಿದ್ದಾರೆ. ನಂತರದ ಸ್ಥಾನದಲ್ಲಿ ಬ್ರೆಜಿಲ್ ಹಾಗೂ ಭಾರತ ಮೂರನೇ ಸ್ಥಾನದಲ್ಲಿದೆ. ರಷ್ಯಾ, ದಕ್ಷಿಣ ಆಫ್ರಿಕಾದಲ್ಲೂ ಸೋಂಕಿತರು ಹೆಚ್ಚುತ್ತಲೇ ಇದ್ದಾರೆ.
ಈ ನಡುವೆ, ಬ್ರಿಟನ್ನಲ್ಲಿ ಸೋಂಕಿತರ ಸಂಖ್ಯೆ 3,02,295ಕ್ಕೆ ಏರಿದೆ. ಇಲ್ಲಿ ಚೇತರಿಕೆ ಪ್ರಮಾಣ ಕಡಿಮೆ ಇದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2,54,894 ಆಗಿದೆ. ಆರಂಭದ ದಿನಗಳಿಗೆ ಹೋಲಿಸಿದರೆ, ಇಲ್ಲಿ ಹೊಸ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.
ಕಳೆದೊಂದು ವಾರದಿಂದ ಬ್ರಿಟನ್ನಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದೆ. 500ಕ್ಕಿಂತಲೂ ಕಡಿಮೆಯಾಗಿದ್ದ ಪ್ರಮಾಣ ಮತ್ತೆ 700-800ಕ್ಕಿಂತ ಹೆಚ್ಚಾಗುತ್ತಿದೆ. ಎರಡು ವಾರಕ್ಕೆ ಹೋಲಿಸಿದಲ್ಲಿ ಶೇ.28ರಷ್ಟು ಹೆಚ್ಚಾಗಿದೆ. ಇನ್ನು ಎರಡನೇ ಅಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಇದು ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಭಾರಿ ಕಳವಳಕ್ಕೆ ದೂಡಿದೆ.
ಆದರೆ, ಹೆಚ್ಚುತ್ತಿರುವ ಕರೊನಾ ಸೋಂಕಿತರ ಸಂಖ್ಯೆ ಆತಂಕ ಪಡಬೇಕಿಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ. ಸಂಖ್ಯೆ ಹೆಚ್ಚಾಯಿತೆಮದು ಉತ್ಪ್ರೇಕ್ಷೆ ಮಾಡಬೇಡಿ ಎಂದು ಸಚಿವರಿಗೂ ಕೋರಿದ್ದಾರೆ. ಲಾಕ್ಡೌನ್ ಸಡಿಲಿಕೆ ಬಳಿಕ ಇಂಥದ್ದೊಂದು ಏರಿಕೆ ನಿರೀಕ್ಷಿತ ಎಂದು ಅವರು ಹೇಳಿದ್ದಾರೆ.
ನಿಜಕ್ಕೂ ಆತಂಕಪಡಬೇಕಿದ್ದರೆ ಅದಕ್ಕೆ ಇನ್ನೆರಡು ವಾರವಾದರೂ ತಡೆಯಿರಿ ಎಂಬುದು ಈಸ್ಟ್ ಅಂಗ್ಲಿಯಾ ಪ್ರಾಧ್ಯಾಪಕ ಪೌಲ್ ಹಂಟರ್ ಸಲಹೆ. ಕರೊನಾ ವೈರಸ್ ದೂರಾಗಿಲ್ಲ ಎಂಬುದು ನಮಗೂ ಗೊತ್ತು. ಅದಕ್ಕಾಗಿ ಅದರೊಂದಿಗೆ ಬದುಕುವುದನ್ನು ರೂಢಿಸಿಕೊಳ್ಳಬೇಕಿದೆ ಎನ್ನುವುದು ಇನ್ನೊಬ್ಬ ತಜ್ಞರ ಅಭಿಮತ.
ಕೇಸ್ಗಳು ಹೆಚ್ಚಳವಾದ ಬೆನ್ನಲ್ಲೇ ಉದ್ಯಮಿಗಳು ಕೂಡ ಚಿಂತಿತರಾಗಿದ್ದಾರೆ. ಮತ್ತೆ ನಿರ್ಬಂಧಗಳನ್ನು ಹೇರಿದರೆ, ಆರ್ಥಿಕತೆ ಸಂಪೂರ್ಣವಾಗಿ ನೆಲಕಚ್ಚಲಿದೆ ಎಂದು ಎಚ್ಚರಿಸಿದ್ದಾರೆ.