

ಬೆಂಗಳೂರು: ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎರಡು ದಿನದಲ್ಲಿ ನಡೆಸಿದ 2021ರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕೀ ಉತ್ತರಗಳನ್ನು ಗುರುವಾರ ಪ್ರಕಟಿಸಿದೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಪಾಲಕ, ಪೋಷಕರು ಮಂಡಳಿಯ ವೆಬ್‌ಸೈಟ್ https://sslc.karnataka.gov.in/ ನಲ್ಲಿ ದಾಖಲೆಗಳ ವಿಭಾಗದಲ್ಲಿ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಲಿಂಕ್ ಒತ್ತಿದರೆ, ಉತ್ತರ ಕೀ ಸಿಗಲಿದೆ.
ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಪರೀಕ್ಷೆ ಮತ್ತು ಭಾಷಾ ವಿಷಯದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಕೀ ಉತ್ತರ ಪ್ರತ್ಯೇಕವಾಗಿ ಸಿಗಲಿದೆ. ಅಲ್ಲಿ, ವಿದ್ಯಾರ್ಥಿಗಳು ತಾವು ಬರೆದಿರುವ ಉತ್ತರ ಹಾಗೂ ಕೀ ಉತ್ತರಗಳನ್ನು ತಾಳಿ ಮಾಡಿಕೊಂಡು, ತಮಗೆ ಎಷ್ಟು ಅಂಕ ಬರಬಹುದು ಎಂಬುದನ್ನು ಅಂದಾಜಿಸಬಹುದಾಗಿದೆ. ಆದರೆ, ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುವುದರಿಂದ ಯಾರು ಕೂಡ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಮಂಡಳಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.