

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವ ಹಂತ ತಲುಪಿದ್ದು, ಆರನೇ ದಿನವಾದ ಗುರುವಾರ ಪ್ರಥಮ ಭಾಷಾ ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ. ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ 4 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.
ಕನ್ನಡ ಸೇರಿ ಪ್ರಥಮ ಭಾಷಾ ಪರೀಕ್ಷೆಗಳಿಗೆ 7,78,618 ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿದ್ದು, 7,64,006 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ.98.12 ಹಾಜರಾಗಿದ್ದು, 14,612 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕಂಟೇನ್ಮೆಂಟ್ ಪ್ರದೇಶಗಳಿಂದ 3,890 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 12,644 ವಲಸೆ ವಿದ್ಯಾರ್ಥಿಗಳ ಪೈಕಿ 12,540 ಮಕ್ಕಳು ಹಾಜರಾಗಿದ್ದರು ಎಂದು ಶಿಕ್ಷಣ ಸಚಿವ ಸುರೇಶ್ಕುಮಾರ್ ತಿಳಿಸಿದ್ದಾರೆ.
ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಅನುದಾನ ಸಹಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ವೇತನ ನೀಡಲು ಸರ್ಕಾರದಿಂದ ಬಡ್ಡಿ ರಹಿತ ಸಾಲ ನೀಡುವ ಕುರಿತು ಹಣಕಾಸು ಇಲಾಖೆ ಹಾಗೂ ಬ್ಯಾಂಕುಗಳ ಜತೆ ಸಮಾಲೋಚನೆ ನಡೆಸಲಾಗಿದೆ. | ಸುರೇಶ್ಕುಮಾರ್ ಶಿಕ್ಷಣ ಸಚಿವ
ಪರೀಕ್ಷಾ ಕೇಂದ್ರಗಳಿಗೆ ಭೇಟಿ
ಸಚಿವ ಸುರೇಶ್ಕುಮಾರ್ ಗುರುವಾರ ತುಮಕೂರು, ಮಧುಗಿರಿ, ಬೆಂಗಳೂರು ಗ್ರಾಮಾಂತರ ತಾಲೂಕುಗಳ 13 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದರು. ಮಕ್ಕಳು ನೆಮ್ಮದಿ ಮತ್ತು ಆಹ್ಲಾದಕರ ವಾತಾವರಣದಲ್ಲಿ ಪರೀಕ್ಷೆ ಬರೆಯುತ್ತಿದ್ದುದು ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆರು ದಿನಗಳ ಪರೀಕ್ಷಾ ಪ್ರಕ್ರಿಯೆಗಳು ಮುಕ್ತಾಯಗೊಂಡಿದ್ದು, ತೃತೀಯ ಭಾಷಾ ಪತ್ರಿಕೆಗಳ ಪರೀಕ್ಷೆ ಮಾತ್ರವೇ ಬಾಕಿ ಇದೆ ಎಂದು ಸಚಿವರು ತಿಳಿಸಿದರು.
ಆಗಸ್ಟ್ ನಂತರ ಶಾಲಾ- ಕಾಲೇಜು ಆರಂಭ?
ತುಮಕೂರು: ಪಿಯು ಕಾಲೇಜು ಹಾಗೂ ಪ್ರೌಢಶಾಲೆಗಳನ್ನು ಮೊದಲು ಆರಂಭಿಸಿ, ಆನಂತರ ಪ್ರಾಥಮಿಕ ಶಾಲೆ ಆರಂಭಿಸುವ ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು. ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಗುರುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕರೊನಾ ಭೀತಿ ಹಿನ್ನೆಲೆಯಲ್ಲಿ ಇನ್ನೂ ಶಾಲಾ-ಕಾಲೇಜುಗಳ ಪುನರಾರಂಭದ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ರಾಜ್ಯಾದ್ಯಂತ ಪಾಲಕರ ಅಭಿಪ್ರಾಯ ಸಂಗ್ರಹಿಸಿದ್ದು, ಅದನ್ನು ಕ್ರೊಡೀಕರಿಸಿ ಆಗಸ್ಟ್ ನಂತರ ಯೋಚನೆ ಮಾಡಲಾಗುವುದು ಎಂದರು.
ತಾಯಿ ಸತ್ತರೂ ಹಾಜರು!
ಚಿಂತಾಮಣಿಯಲ್ಲಿ ವಿದ್ಯಾರ್ಥಿಯೊಬ್ಬ ತಾಯಿ ಕ್ಯಾನ್ಸರ್ನಿಂದ ಜೂ.30ರಂದು ಮರಣ ಹೊಂದಿದ್ದರೂ, ಮುಂದಿನ ಎಲ್ಲ ಪರೀಕ್ಷೆಗೆ ಹಾಜರಾಗುವ ಮೂಲಕ ಧೈರ್ಯ ತೋರಿದ್ದಾನೆ.
32 ವಿದ್ಯಾರ್ಥಿಗಳು ವಂಚಿತ
ರಾಜ್ಯದಲ್ಲಿ ಸೋಂಕಿನಿಂದ 32 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿ ದ್ದಾರೆ. ಪರೀಕ್ಷಾ ಕೇಂದ್ರಗಳಿಂದ ಈ ವಿದ್ಯಾರ್ಥಿ ಗಳಿಗೆ ಸೋಂಕು ತಗುಲಿಲ್ಲ. ರೋಗದ ಮೂಲಗಳು ಬೇರೆ ಆಗಿವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ವಿದ್ಯಾರ್ಥಿನಿಗೆ ಸೋಂಕು
ಮಂಡ್ಯ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಸೋಂಕು ಧೃಡಪಟ್ಟಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ.