

ನವದೆಹಲಿ: ಕರೊನಾ ಸೋಂಕಿನ ಹಿನ್ನಲೆಯಲ್ಲಿ ತೆಲಂಗಾಣ, ತಮಿಳುನಾಡು ಮತ್ತು ಪುದುಚೆರಿಗಳಲ್ಲಿ 10ನೇ ತರಗತಿ ವಿದ್ಯಾರ್ಥಿಗಳನ್ನು ತ್ರೖೆಮಾಸಿಕ, ಅರ್ಧವಾರ್ಷಿಕ ಪರೀಕ್ಷೆ ಮತ್ತು ಹಾಜರಾತಿ ಆಧರಿಸಿ ಮುಂದಿನ ತರಗತಿಗೆ ತೇರ್ಗಡೆ ಮಾಡಲು ನಿರ್ಧರಿಸಲಾಗಿದೆ.
ತಮಿಳುನಾಡಿನಲ್ಲಿ 9 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿದ್ದು, ಅವರೆಲ್ಲರನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಿರುವುದಾಗಿ ತಿಳಿಸಲಾಗಿದೆ. ಲಾಕ್ಡೌನ್ ಕಾರಣದಿಂದಾಗಿ ಮುಂದೂಡಲಾಗಿದ್ದ ಪರೀಕ್ಷೆ ಜೂನ್ 15ರಿಂದ ನಡೆಸಲು ನಿರ್ಧರಿಸಲಾಗಿತ್ತು. ಹೈ ಕೋರ್ಟ್ ಸೂಚನೆ ಮೇರೆಗೆ ಪಾಲಕರು ಮತ್ತು ಶಿಕ್ಷಕರೊಂದಿಗೆ ಮಂಗಳವಾರ ಸಭೆ ನಡೆಸಿ, ಪರೀಕ್ಷೆ ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ತೆಲಂಗಾಣದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡಿರುವುದಾಗಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಸೋಮವಾರ ತಿಳಿಸಿದ್ದಾರೆ. 5.35 ಲಕ್ಷ ವಿದ್ಯಾರ್ಥಿಗಳಿಗೆ 6 ವಿಷಯಗಳ 11 ಪರೀಕ್ಷೆ ನಡೆಯಬೇಕಿತ್ತು. 3 ಪರೀಕ್ಷೆಗಳು ಮುಗಿಯುವಷ್ಟರಲ್ಲಿ ಲಾಕ್ಡೌನ್ ಜಾರಿಯಾಯಿತು. ಪುದುಚೆರಿಯಲ್ಲಿಯೂ ಪರೀಕ್ಷೆ ರದ್ದು ಮಾಡಿರುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಪಠ್ಯ ಹೊರೆ, ಬೋಧನೆ ಅವಧಿ ಇಳಿಸಲು ಚಿಂತನೆ
ನವದೆಹಲಿ: ಕರೊನಾ ಹಾವಳಿ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಪಠ್ಯಕ್ರಮದ ಹೊರೆ ಹಾಗೂ ಬೋಧನಾ ಅವಧಿ ಇಳಿಸುವ ಬಗ್ಗೆ ಕೇಂದ್ರ ಸರ್ಕಾರ ಆಲೋಚಿಸಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್ಆರ್ಡಿ) ಸಚಿವ ರಮೇಶ್ ಪೋಖ್ರಿಯಾಲ್ ಮಂಗಳವಾರ ಹೇಳಿದ್ದಾರೆ. ಈ ಬಗ್ಗೆ ಶಿಕ್ಷಕರು ಹಾಗೂ ಶಿಕ್ಷಣ ತಜ್ಞರು ಸಲಹೆ ನೀಡಬಹುದು. ಸಲಹೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಿಲಬಸ್ಫಾರ್ಸ್ಟುಡೆಂಟ್ಸ್2020ಗೆ ಹ್ಯಾಶ್ಟ್ಯಾಗ್ ಮಾಡಬಹುದು ಎಂದು ತಿಳಿಸಿದ್ದಾರೆ.
ಆಗಸ್ಟ್ 15ರಂದು ಶಾಲೆಗಳ ಪುನಾರಂಭಕ್ಕೆ ಚಿಂತನೆ ನಡೆಸಲಾಗುತ್ತಿದೆಯೆಂದು ಸಚಿವರು ಮತ್ತೊಮ್ಮೆ ಹೇಳಿದ್ದಾರೆ.
ರಾಜ್ಯಗಳ ಶಿಕ್ಷಣ ಕಾರ್ಯದರ್ಶಿಗಳ ಸಭೆಯ ನಂತರ ಸಚಿವರು ಕೇಂದ್ರದ ಒಲವನ್ನು ಬಹಿರಂಗಪಡಿಸಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ, ಆನ್ಲೈನ್ ಅಥವಾ ಡಿಜಿಟಲ್ ಕಲಿಕೆ ಮುಂತಾದ ವಿಷಯಗಳನ್ನು ಸಭೆ ರ್ಚಚಿಸಿತು.
ಸಚಿವರ ಟ್ವಿಟ್ಟರ್ ಅಥವಾ ಫೇಸ್ಬುಕ್ ಪೇಜ್ಗೂ ಸಲಹೆ ಕಳುಹಿಸಬಹದು ಎಂದು ಎಚ್ಆರ್ಡಿ ಸಚಿವಾಲಯ ತಿಳಿಸಿದೆ.