

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೇಂದ್ರ ಪಠ್ಯಕ್ರಮ ಪರೀಕ್ಷಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಸುಳಿವು ನೀಡಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು, ಇದೇ ವೇಳೆ ಇತರೆ ರಾಜ್ಯಗಳ ಪರೀಕ್ಷಾ ಮಂಡಳಿಗಳು ಅನುಸರಿಸುತ್ತಿರುವ ಪ್ರಶ್ನೆಪತ್ರಿಕೆ ಮಾದರಿ ಮತ್ತು ಮೌಲ್ಯಮಾಪನ ವಿಧಾನಗಳನ್ನು ಕೂಡ ಅಧ್ಯಯನ ಮಾಡಲು ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಇತರೆ ರಾಜ್ಯಗಳ ಮಂಡಳಿಗಳ ಮಾದರಿಗಳನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಗಳನ್ನು ಅಧ್ಯಯನ ಮಾಡಲು ಮಂಡಳಿಯ ಅಧಿಕಾರಿಗಳು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತರೆ ಮಂಡಳಿಗಳ ಮೌಲ್ಯಮಾಪನ ವಿಧಾನ ಮತ್ತು ರಾಜ್ಯದಲ್ಲಿರುವ ವಿಧಾನಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ರಾಜ್ಯದ ಮೌಲ್ಯಮಾಪಕರು ಪಠ್ಯಪುಸ್ತಕದಲ್ಲಿರುವ ವಿಷಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ ಉತ್ತರವಿರಬೇಕು ಎಂದು ಬಯಸುತ್ತಾರೆ. ಅದೇ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಂಡಳಿಗಳಲ್ಲಿ ಪರಿಕಲ್ಪನೆಗಳನ್ನು ತಿಳಿಸುವ ಉತ್ತರಗಳನ್ನು ಬಯಸುತ್ತಾರೆ. ಈ ಕಾರಣದಿಂದ ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ವ್ಯವಸ್ಥೆಯ ಜತೆಗೆ ಇತರೆ ಆಯಾಮಗಳಲ್ಲಿಯೂ ನೋಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಪಠ್ಯಪುಸ್ತಕ ಆಧಾರಿತ ಪ್ರಶ್ನೆಗಳಿಂದ ದೂರ ಸರಿದು ವಿದ್ಯಾರ್ಥಿಗಳು ಸಮಸ್ಯೆಪರಿಹರಿಸುವ ಕೌಶಲ ಮತ್ತು ಪರಿಕಲ್ಪನೆಗಳನ್ನು ಅನ್ವಯಿಸುವ ಸಾಮರ್ಥ್ಯ ಬೆಳೆಸಬೇಕಿದೆ. ಕೂಲಂಕಷವಾಗಿ ಪರಿಶೀಲಿಸಬಹುದಾದ ಮಾದರಿಗೆ ಬದಲಾಯಿಸಲು ತಜ್ಞರು ತಮ್ಮ ಅಭಿಪ್ರಾಯ ತಿಳಿಸಿರುವ ಕುರಿತು ತಿಳಿದು ಬಂದಿದೆ.
ಐಚ್ಛಿಕ ಪತ್ರಿಕೆ ಇರಲಿ:
ಸಿಬಿಎಸ್‌ಇಯಲ್ಲಿ ಅಳವಡಿಸಿಕೊಂಡಿರುವ ಐದು ಮತ್ತೊಂದು ವಿಷಯಗಳ ವ್ಯವಸ್ಥೆಯನ್ನು ಸಕ್ರಿಯವಾಗಿ ಪರಿಗಣಿಸುವಂತೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು, ಸರ್ಕಾರಿ ಶಾಲಾ ಶಿಕ್ಷಕರ ಸಂಘಟನೆಗಳು ಸರ್ಕಾರವನ್ನು ಕೋರಿದ್ದಾರೆ. ಆರು ವಿಷಯಗಳ ಪೈಕಿ ಒಂದು ವಿಷಯ ಐಚ್ಛಿಕವಾಗಿರುತ್ತದೆ. ವಿದ್ಯಾರ್ಥಿಗಳು ಯಾವ ಪತ್ರಿಕೆಗೆ ಹಾಜರಾಗಬೇಕೆಂದು ಆಯ್ಕೆ ಮಾಡಲು ಅವಕಾಶವಿರುತ್ತದೆ.
ಗಣಿತ (ಮೂಲ ಮತ್ತು ಮುಂದುವರಿದ) ಹಾಗೂ ವಿಜ್ಞಾನ, ತಂತ್ರಜ್ಞಾನದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಉತ್ಸುಕರಾಗಿರುವ ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಗಳಿವೆ ಎಂದು ತಜ್ಞರು ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.